ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಹಳೇ ಆರ್ಟಿಓ ಕಚೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ನೇಹಿತರು ಮೃತಪಟ್ಟಿದ್ದಾರೆ. ಆಳಂದ ಪಟ್ಟಣದ ನಿವಾಸಿಗಳಾದ 25 ವರ್ಷದ ಶ್ರೀಕಾಂತ, 26 ವರ್ಷದ ಗುರುನಾಥ ಹಾಗೂ ಶಶಿಕಾಂತ ತಮ್ಮ ಸ್ನೇಹಿತ ದರ್ಶನ್ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಬೈಕ್ನಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ತಡರಾತ್ರಿ ಬೈಕ್ಗೆ ಹಿಂದಿನಿಂದ ಅಪರಿಚಿತ ಟ್ರಕ್ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ.
ಅಪಘಾತದ ರಭಸಕ್ಕೆ ಶ್ರೀಕಾಂತ ಮತ್ತು ಗುರುನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಶಿಕಾಂತ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಿಸದೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಅವರೂ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















