ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ದೊಣ್ಣೆ, ಕೋಲು ಹಾಗೂ ಕಲ್ಲುಗಳನ್ನು ಹಿಡಿದು ಮಾರಾಮಾರಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಅನ್ಯ ಕೋಮಿನ ಹುಡುಗ ಮತ್ತು ಹುಡುಗಿ ಪ್ರೀತಿಸಿ ಮನೆ ಬಿಟ್ಟು ತೆರಳಿದ್ದರು. ಇದೇ ನೆಪವೊಡ್ಡಿ 80 ಮನೆಗಳಿರುವ ಒಂದು ಸಮುದಾಯದ ಸುಮಾರು 50ಕ್ಕೂ ಹೆಚ್ಚು ಜನರ ಗುಂಪು, 25 ಮನೆಗಳಿರುವ ಮತ್ತೊಂದು ಸಮುದಾಯದ ಮನೆಗೆ ನುಗ್ಗಿ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯಲ್ಲಿ ಉಮಾಪತಿ, ಚನ್ನಪ್ಪ, ನವೀನ್, ಪ್ರಶಾಂತ್, ಆಲೂರು ಸಿದ್ದಪ್ಪ, ಹೇಮಣ್ಣ ಹಾಗೂ ಭಾಗ್ಯಮ್ಮ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಗಾಯಾಳುಗಳನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಮಾಪತಿ ಎಂಬ ವೃದ್ಧರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

















