ಬೆಂಗಳೂರು: ಉತ್ತರ ಕರ್ನಾಟಕದ ಜನರ ಜೀವನಾಡಿಯಾಗಿರುವ, ದಿನನಿತ್ಯದ ಪ್ರಮುಖ ಆಹಾರವಾದ ಬಿಳಿಜೋಳದ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಂಚುರಿ ಬಾರಿಸಿದೆ. ಮಾರುಕಟ್ಟೆಯಲ್ಲಿ ಜೋಳದ ದರ ಕೆಜಿಗೆ 100 ರೂಪಾಯಿ ಗಡಿ ದಾಟಿದ್ದು, ರೊಟ್ಟಿ ಪ್ರಿಯರು ಹಾಗೂ ಖಾನಾವಳಿ ಮಾಲೀಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದು ಕಡೆ ಬೆಳೆಗಾರರಿಗೆ ಬಂಪರ್ ಬೆಲೆ ಸಿಕ್ಕಿದ್ದರೆ, ಮತ್ತೊಂದೆಡೆ ಗ್ರಾಹಕರಿಗೆ ದುಬಾರಿ ದರ ಆಘಾತ ತಂದಿದೆ.
ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 5 ಸಾವಿರ ರೂಪಾಯಿ ಆಸುಪಾಸಿನಲ್ಲಿದ್ದ ಜೋಳದ ಬೆಲೆ ಇದೀಗ ದಿಢೀರ್ ದ್ವಿಗುಣಗೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ 10 ಸಾವಿರ ರೂಪಾಯಿ ದಾಟಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 100 ರಿಂದ 110 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈ ಹಿಂದೆ ಕೆಜಿಗೆ ಕೇವಲ 40 ರಿಂದ 50 ರೂಪಾಯಿಗೆ ಸಿಗುತ್ತಿದ್ದ ಜೋಳದ ಬೆಲೆ ಏಕಾಏಕಿ ದುಪ್ಪಟ್ಟಾಗಿರುವುದು ಮಾರುಕಟ್ಟೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಿತ್ತನೆ ಪ್ರದೇಶದಲ್ಲಿ ಭಾರೀ ಇಳಿಕೆ ಹಾಗೂ ವಾಣಿಜ್ಯ ಬೆಳೆಗಳತ್ತ ರೈತರ ಒಲವು
ಬೆಲೆ ಏರಿಕೆಗೆ ಮಾರುಕಟ್ಟೆಯಲ್ಲಿ ಜೋಳದ ತೀವ್ರ ಕೊರತೆ ಎದುರಾಗಿರುವುದೇ ಪ್ರಮುಖ ಕಾರಣವಾಗಿದೆ. ಉದಾಹರಣೆಗೆ, ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಈ ಹಿಂದೆ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳವನ್ನು ಬೆಳೆಯಲಾಗುತ್ತಿತ್ತು. ಆದರೆ, ಪ್ರಸ್ತುತ ಈ ಬಿತ್ತನೆ ಪ್ರದೇಶವು 30 ರಿಂದ 40 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. ಹಿಂದಿನ ದಿನಗಳ ಬರಗಾಲದ ಆತಂಕ ಹಾಗೂ ಸೂಕ್ತ ಲಾಭದ ನಿರೀಕ್ಷೆಯಲ್ಲಿ ರೈತರು ಜೋಳದ ಬದಲಾಗಿ ಕಬ್ಬು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಜೋಳದ ಇಳುವರಿ ಹಾಗೂ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಪೂರೈಕೆಯಾಗುವ ಪ್ರಮಾಣ ಪಾತಾಳಕ್ಕೆ ಇಳಿದಿದೆ.
ವ್ಯಾಪಾರ ವಹಿವಾಟಿನ ಮೇಲೆ ಬೆಲೆ ಏರಿಕೆ ಪ್ರಭಾವ
ಜೋಳದ ಬೆಲೆ ಗಗನಕ್ಕೇರಿರುವುದರಿಂದ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಖರೀದಿದಾರರ ಸಂಖ್ಯೆ ಇಳಿಮುಖವಾಗಿದೆ. ದೈನಂದಿನ ವ್ಯಾಪಾರದಲ್ಲಿ ಈ ಹಿಂದೆ ದಿನವೊಂದಕ್ಕೆ ಎರಡು ಮೂರು ಕ್ವಿಂಟಲ್ ಜೋಳ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು, ಈಗ ಕೇವಲ ಒಂದು ಕ್ವಿಂಟಲ್ ಮಾರಾಟ ಮಾಡಲು ಹರಸಾಹಸ ಪಡುವಂತಾಗಿದೆ. ಗ್ರಾಹಕರು ಹೆಚ್ಚಿನ ಹಣ ತೆರಲು ಹಿಂದೇಟು ಹಾಕುತ್ತಿರುವುದು ಹಾಗೂ ರೈತರಿಂದಲೂ ಅಗತ್ಯ ಪ್ರಮಾಣದ ಪೂರೈಕೆ ಇಲ್ಲದಿರುವುದು ವ್ಯಾಪಾರಸ್ಥರ ವಹಿವಾಟಿಗೆ ಪೆಟ್ಟು ನೀಡಿದೆ.
ಖಾನಾವಳಿ ಊಟದ ದರ ಹೆಚ್ಚಳದ ಭೀತಿ
ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಖಾನಾವಳಿಗಳು ಜೋಳದ ರೊಟ್ಟಿ ಊಟಕ್ಕೆ ಪ್ರಸಿದ್ಧವಾಗಿವೆ. ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳೇ ಈ ಖಾನಾವಳಿಗಳ ಪ್ರಮುಖ ಗ್ರಾಹಕರು. ಇದೀಗ ಊಟದ ಮುಖ್ಯ ಕಚ್ಚಾವಸ್ತುವಾಗಿರುವ ಜೋಳದ ದರವೇ ದುಪ್ಪಟ್ಟಾಗಿರುವುದರಿಂದ ಊಟದ ದರವನ್ನು ಹೆಚ್ಚಿಸುವುದು ಖಾನಾವಳಿ ಮಾಲೀಕರಿಗೆ ಅನಿವಾರ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಶೀಘ್ರದಲ್ಲೇ ಪ್ರತಿ ಊಟದ ದರದಲ್ಲಿಯೂ ಏರಿಕೆಯಾಗಲಿದ್ದು, ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತವಾಗಿದೆ.



















