ಪಾಟ್ನಾ: ಮಕ್ಕಳ ಆಯುಷ್ಯ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ ಆಚರಿಸುವ ‘ಛಠ್ ಪೂಜೆ’ಯ ಸಂಭ್ರಮದ ನಡುವೆಯೇ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಅತ್ಯಂತ ದಾರುಣ ಹಾಗೂ ಮನಕಲಕುವ ಘಟನೆಯೊಂದು ನಡೆದಿದೆ. ಪೂಜೆಗಾಗಿ ಸಿದ್ಧಪಡಿಸಿಟ್ಟಿದ್ದ ಪ್ರಸಾದವನ್ನು ನೈವೇದ್ಯಕ್ಕೂ ಮೊದಲೇ ಮುಟ್ಟಿ, ತಿಂದಳು ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಹಸುಳೆಯನ್ನು ಥಳಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮೃತ ಬಾಲಕಿಯನ್ನು ರಾಜು ಪಾಸ್ವಾನ್ ಅವರ ಪುತ್ರಿ ಸುಹಾನಿ ಕುಮಾರಿ (4) ಎಂದು ಗುರುತಿಸಲಾಗಿದ್ದು, ಆರೋಪಿ ತಾಯಿ ರೀನಾ ಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ
ಭಾನುವಾರ ಬಿಹಾರದಾದ್ಯಂತ ಛಠ್ ಪೂಜೆಯ ಸಿದ್ಧತೆಗಳು ಭರದಿಂದ ಸಾಗಿದ್ದವು. ರಾಜು ಪಾಸ್ವಾನ್ ಅವರ ಕುಟುಂಬದ ಇತರ ಸದಸ್ಯರು ಪೂಜೆಯ ವ್ಯವಸ್ಥೆ ಮಾಡಲು ಸಮೀಪದ ನದಿ ಘಾಟ್ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ರೀನಾ ಕುಮಾರಿ ದೇವರಿಗೆ ನೈವೇದ್ಯ ಅರ್ಪಿಸಲು ಪ್ರಸಾದವನ್ನು ತಯಾರಿಸುತ್ತಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕಿ ಸುಹಾನಿ, ಪೂಜೆಗಾಗಿ ಇಟ್ಟಿದ್ದ ಪ್ರಸಾದದ ಪದಾರ್ಥವೊಂದನ್ನು ಮುಟ್ಟಿ ತಿಂದಿದ್ದಾಳೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಾಯಿ ರೀನಾ, ಮಗುವಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಾಯಿಯ ಹೊಡೆತದಿಂದಾಗಿ ಬಾಲಕಿಯ ಆರೋಗ್ಯ ಸ್ಥಿತಿ ತಕ್ಷಣವೇ ಹದಗೆಟ್ಟಿದೆ. ಗಾಬರಿಗೊಂಡ ರೀನಾ ಮಗುವನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಪತ್ನಿಗೆ ಕಠಿಣ ಶಿಕ್ಷೆಗೆ ಪತಿಯ ಆಗ್ರಹ
ಮಗಳ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ರಾಜು ಪಾಸ್ವಾನ್ ಮತ್ತು ರೀನಾ ದಂಪತಿಗೆ ಏಳು ವರ್ಷದ ಶಿವಾನಿ, ನಾಲ್ಕು ವರ್ಷದ ಸುಹಾನಿ ಹಾಗೂ ಒಂದೂವರೆ ವರ್ಷದ ರಾಜಾ ಎಂಬ ಮೂವರು ಮಕ್ಕಳಿದ್ದರು. ಇದೀಗ ಮುದ್ದಿನ ಮಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ತಂದೆ ರಾಜು ಪಾಸ್ವಾನ್, “ಮಗಳೇ ಇಲ್ಲದ ಮೇಲೆ ನನಗೆ ಈ ಹಬ್ಬಕ್ಕೆ ಯಾವುದೇ ಅರ್ಥವಿಲ್ಲ. ಇಂತಹ ಕೃತ್ಯ ಎಸಗಿದ ಪತ್ನಿ ನನ್ನ ಜೀವನದಲ್ಲಿ ಇನ್ನು ಬೇಡ; ಉಳಿದ ಮಕ್ಕಳನ್ನು ನಾನೇ ಒಬ್ಬಂಟಿಯಾಗಿ ಸಾಕುತ್ತೇನೆ. ಆಕೆಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಪೊಲೀಸರ ಮುಂದೆ ತಮ್ಮ ಆಕ್ರೋಶ ಮತ್ತು ನೋವನ್ನು ಹೊರಹಾಕಿದ್ದಾರೆ.
ಪೊಲೀಸರಿಂದ ತನಿಖೆ ಚುರುಕು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಠಾಣಾಧಿಕಾರಿ ರಾಕೇಶ್ ಕುಮಾರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಸಮಸ್ತಿಪುರದ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ತಾಯಿ ರೀನಾ ಕುಮಾರಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮತ್ತು ತನಿಖೆ ಪೂರ್ಣಗೊಂಡ ಬಳಿಕ ಬಾಲಕಿಯ ಸಾವಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ಸ್ಪಷ್ಟವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



















