ಲಕ್ನೋ: ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಘುಗ್ಲಿ ನಗರ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ 27.36 ಲಕ್ಷ ರೂಪಾಯಿ ಮೊತ್ತದ ಕಸದ ಬುಟ್ಟಿ (ಡಸ್ಟ್ಬಿನ್) ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ, ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿದಂತೆ ಒಟ್ಟು 12 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾರುಕಟ್ಟೆ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆ ನೀಡಿ ಕಸದ ಬುಟ್ಟಿಗಳನ್ನು ಖರೀದಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟುಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
2018ರಲ್ಲಿ ಘುಗ್ಲಿ ನಗರ ಪಂಚಾಯಿತಿಯಿಂದ 200 ಕಸದ ಬುಟ್ಟಿಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಸರ್ಕಾರದ ಆದೇಶಗಳು ಮತ್ತು ನಿಗದಿತ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಬಿಡ್ಗಳನ್ನು ಸಲ್ಲಿಸಲು ಕೇವಲ ನಾಲ್ಕು ದಿನಗಳ ಕಾಲಾವಕಾಶ ನೀಡಿರುವುದು ಟೆಂಡರ್ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿಸಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ 2,400 ರೂ.ಯಿಂದ 3,400 ರೂ.ಗೆ ಲಭ್ಯವಿದ್ದ 100 ಲೀಟರ್ ಸಾಮರ್ಥ್ಯದ ಕಸದ ಬುಟ್ಟಿಗಳಿಗೆ, ಟೆಂಡರ್ನಲ್ಲಿ ಪ್ರತಿ ಬುಟ್ಟಿಗೆ ಬರೋಬ್ಬರಿ 14,160 ರೂ. ದರವನ್ನು ಅನುಮೋದಿಸಲಾಗಿದೆ. ಬಳಿಕ 2023ರ ಮೇ 20 ಮತ್ತು ಆಗಸ್ಟ್ 21ರಂದು ತಲಾ 13.68 ಲಕ್ಷ ರೂ.ಗಳಂತೆ ಎರಡು ಕಂತುಗಳಲ್ಲಿ ಒಟ್ಟು 27.36 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ.
ಹಾಲಿ, ಮಾಜಿ ಅಧ್ಯಕ್ಷರು ಸೇರಿ 12 ಮಂದಿ ವಿರುದ್ಧ ಕೇಸ್
ಪ್ರಕರಣದಲ್ಲಿ ದಾಖಲಾಗಿರುವ 12 ಆರೋಪಿಗಳ ಪಟ್ಟಿಯಲ್ಲಿ ಇಬ್ಬರು ನಗರ ಪಂಚಾಯಿತಿ ಅಧ್ಯಕ್ಷರು, ಏಳು ಮಂದಿ ಅಧಿಕಾರಿಗಳು ಹಾಗೂ ಮೂರು ಸಂಸ್ಥೆಗಳ ಪ್ರತಿನಿಧಿಗಳು ಸೇರಿದ್ದಾರೆ. 2018ರಲ್ಲಿ ಟೆಂಡರ್ ಕರೆದಾಗ ಅಧ್ಯಕ್ಷರಾಗಿದ್ದ ಊರ್ಮಿಳಾ ದೇವಿ, ಅಂದಿನ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಮಿಶ್ರಾ, ಮಾಜಿ ಗುಮಾಸ್ತ ಹೀರ್ ಪ್ರಸಾದ್ ಮತ್ತು ಸಂತೋಷ್ ಜೈಸ್ವಾಲ್ ಸೇರಿದಂತೆ ಹಲವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದರೆ, ಹಾಲಿ ಅಧ್ಯಕ್ಷರ ಅವಧಿಯಲ್ಲಿ ಹಣ ಪಾವತಿಯಾಗಿದೆ. ಹೀಗಾಗಿ ಟೆಂಡರ್, ಖರೀದಿ ಮತ್ತು ಹಣ ಬಿಡುಗಡೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಸರ್ಕಾರದ ತನಿಖೆ ಬಳಿಕ ಎಫ್ಐಆರ್ ದಾಖಲು
ಈ ಅವ್ಯವಹಾರದ ಕುರಿತು ಸರ್ಕಾರದ ಮಟ್ಟದಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ವಿಶೇಷ ತನಿಖೆಗೆ ಆದೇಶಿಸಲಾಗಿತ್ತು. ತನಿಖಾ ವರದಿಯಲ್ಲಿ ಟೆಂಡರ್ ಪ್ರಕ್ರಿಯೆ, ದರ ನಿಗದಿ, ಖರೀದಿ ಮತ್ತು ಪಾವತಿಯಲ್ಲಿ ಭಾರಿ ಅಕ್ರಮ ನಡೆದಿರುವುದು ದೃಢಪಟ್ಟಿತ್ತು. ವರದಿಯ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನೀಡಿದ ನಂತರ, 2026ರ ಅಕ್ಟೋಬರ್ 28ರಂದು ಅಧಿಕೃತವಾಗಿ ಎಫ್ಐಆರ್ ದಾಖಲಿಸಲಾಗಿದೆ. ಮುಂದಿನ ತನಿಖೆಯಲ್ಲಿ ಲಭ್ಯವಾಗುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


















