ಬೆಂಗಳೂರು: ದೇಶದ ಪ್ರಮುಖ ಗ್ರಾಹಕ ಉತ್ಪನ್ನ ತಯಾರಕ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL), ತನ್ನ ಪ್ರಮುಖ ಡಿಟರ್ಜೆಂಟ್ ಬ್ರ್ಯಾಂಡ್ ಗಳಾದ ಸರ್ಫ್ ಎಕ್ಸೆಲ್ (Surf Excel), ರಿನ್ (Rin) ಮತ್ತು ವೀಲ್ (Wheel) ಬೆಲೆಗಳನ್ನು ಶೇ. 11ರವರೆಗೆ ಹೆಚ್ಚಿಸಿದೆ. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚ ಮತ್ತು ಹಣದುಬ್ಬರದ ಹೊಡೆತದಿಂದಾಗಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ.
ಉತ್ಪನ್ನಗಳ ಪ್ಯಾಕೆಟ್ ಗಾತ್ರಕ್ಕೆ ಅನುಗುಣವಾಗಿ ಬೆಲೆಯಲ್ಲಿ 1 ರೂ. ನಿಂದ 10 ರೂ.ವರೆಗೆ ಏರಿಕೆಯಾಗಿದೆ.
ಪ್ರಮುಖ ಉತ್ಪನ್ನಗಳ ಬೆಲೆ ವಿವರ ಇಲ್ಲಿದೆ
• ಸರ್ಫ್ ಎಕ್ಸೆಲ್ ಕ್ವಿಕ್ ವಾಶ್: 1 ಕೆಜಿ ಪ್ಯಾಕ್ ಬೆಲೆ ಈಗ 235 ರೂ.ನಿಂದ 245 ರೂ.ಗೆ ಏರಿಕೆಯಾಗಿದೆ (10 ರೂ. ಹೆಚ್ಚಳ). 500 ಗ್ರಾಂ ಪ್ಯಾಕ್ ಬೆಲೆ 128 ರೂ. ತಲುಪಿದೆ.
• ಸರ್ಫ್ ಎಕ್ಸೆಲ್ ಈಸಿ ವಾಶ್: 1 ಕೆಜಿ ಪ್ಯಾಕ್ ಬೆಲೆ 167 ರೂ.ನಿಂದ 172 ರೂ.ಗೆ ಹಾಗೂ 500 ಗ್ರಾಂ ಪ್ಯಾಕ್ ಬೆಲೆ 87 ರೂ.ಗೆ ಏರಿಕೆಯಾಗಿದೆ.
• ರಿನ್ ಮತ್ತು ವೀಲ್ ಉತ್ಪನ್ನಗಳು: ರಿನ್ ಡಿಟರ್ಜೆಂಟ್ ಪೌಡರ್ ಮತ್ತು ವೀಲ್ ಸೋಪ್ ಹಾಗೂ ಪೌಡರ್ ಬೆಲೆಗಳೂ ಕೂಡ ಪರಿಷ್ಕೃತಗೊಂಡಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆಯ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸಂಸ್ಥೆ ತೀಲಿಸಿದೆ. ಇದರಿಂದಾಗಿ ಸಾಮಾನ್ಯ ಜನರ ದಿನಬಳಕೆಯ ವಸ್ತುಗಳ ಖರೀದಿಯ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ.
ದೇಶದಲ್ಲಿ ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಬಸ್ ಟಿಕೆಟ್ ದರ, ನಂದಿನಿ ಹಾಲಿನ ದರಗಳು ಜಾಸ್ತಿಯಾಗಿವೆ. ಅಕ್ಕಿ ಬೆಲೆ ಕೂಡ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ, ಸರ್ಫ್ ಎಕ್ಸೆಲ್ ಉತ್ಪನ್ನಗಳು ಕೂಡ ಜಾಸ್ತಿಯಾಗಿರುವುದು ಜನಸಾಮಾನ್ಯರಿಗೆ ಮತ್ತೊಂದು ಬರೆ ಬಿದ್ದಂತಾಗಿದೆ.



















