ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ಬೆನ್ನಲ್ಲೇ ಅಧಿಕಾರಿಗಳು ಫೀಲ್ಡ್ ಆಪರೇಷನ್ ನಡೆಸಿದ್ದಾರೆ. ಮೆಡಿಕಲ್ ಕಾಲೇಜು ಕ್ಯಾಂಟೀನ್ನಿಂದ ಬೇಕರಿವರೆಗೆ ಫುಡ್ ಸೇಫ್ಟಿ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಡಾ. ಪ್ರವೀಣ್ ಕುಮಾರ್ ನೇತೃತ್ವದ ತಂಡದಿಂದ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜು ಕ್ಯಾಂಟೀನ್ ಮತ್ತು ಹಾಸ್ಟೆಲ್ ಮೆಸ್ ಅನ್ನು ಅಧಿಕಾರಿಗಳು ಜಾಲಾಡಿದ್ದಾರೆ. ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟದ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಕ್ಯಾಂಟೀನ್ ಆಹಾರ ಮತ್ತು ಅಡುಗೆ ಸಾಮಗ್ರಿಗಳ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಲಾಗಿದೆ.
ಅಡುಗೆಗೆ ಬಳಸುವ ನೀರಿನ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆಹಾರ ತಯಾರಕರ ಆರೋಗ್ಯ ತಪಾಸಣೆ ಮತ್ತು ವೈಯಕ್ತಿಕ ಸ್ವಚ್ಛತೆಗೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ಮುಲ್ಕಿ ಕಾರ್ನಾಡ್ ಬೇಕರಿಗಳ ಮೇಲೂ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಹಬ್ಬದ ಸಿಹಿತಿಂಡಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿದ ಶಂಕೆ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ. ಬಣ್ಣ ಬಳಸಿ ತಯಾರಿಸಿದ ಶಂಕಿತ ಸಿಹಿತಿಂಡಿಗಳನ್ನು ಸೀಜ್ ಮಾಡಿ ಸೀಲ್ ಮಾಡಲಾಗಿದೆ. ಈ ಶಂಕಿತ ಸಿಹಿತಿಂಡಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿ ಬೇಕರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಿಹಿತಿಂಡಿಗಳಿಗೆ ಬಣ್ಣ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

















