ಮುಂಬಯಿ: ಮಹಿಳಾ ಬಿಗ್ ಬ್ಯಾಶ್ ಲೀಗ್ (WBBL) ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಿರುವ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರು ಇದೀಗ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಗುರುವಾರ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಮ್ಮ ಜೊತೆಗಾರ್ತಿ ಚಾರ್ಲಿ ನಾಟ್ ಅವರ ರನೌಟ್‌ಗೆ ಕಾರಣರಾದ ಯಾಸ್ತಿಕಾ, ಕಾಮೆಂಟೇಟರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಮೆಂಟೇಟರ್ ಒಬ್ಬರು ಈ ಪ್ರಮಾದವನ್ನು “ಅಬ್ಸೊಲ್ಯೂಟ್ಲಿ ಕ್ರಿಮಿನಲ್” (ಸಂಪೂರ್ಣ ಅಪರಾಧ) ಎಂದು ಜರಿದಿದ್ದಾರೆ.
ಸಿಡ್ನಿಯ ಡ್ರಮ್‌ಮಾಯ್ನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟರ್ ಚಾರ್ಲಿ ನಾಟ್ ಅತ್ಯಮೋಘ ಫಾರ್ಮ್‌ನಲ್ಲಿದ್ದರು. ಕೇವಲ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 104 ರನ್ ಚಚ್ಚಿದ ಅವರು ತಮ್ಮ ಚೊಚ್ಚಲ ಡಬ್ಲ್ಯುಬಿಬಿಎಲ್ ಶತಕ ಸಿಡಿಸಿ ಮಿಂಚಿದ್ದರು. ಆದರೆ 18ನೇ ಓವರ್‌ನಲ್ಲಿ ನಡೆದ ಒಂದು ದುರದೃಷ್ಟಕರ ರನೌಟ್ ಅವರ ಅಮೋಘ ಇನಿಂಗ್ಸ್‌ಗೆ ಬ್ರೇಕ್ ಹಾಕಿತು. ನಾಟ್ ಅವರು ಚೆಂಡನ್ನು ಆಫ್-ಸೈಡ್ ಕಡೆಗೆ ಅಟ್ಟಿ ಎರಡು ರನ್ ಕದಿಯಲು ಮುಂದಾದರು. ಆದರೆ ನಾನ್-ಸ್ಟ್ರೈಕರ್‌ನಲ್ಲಿದ್ದ ಯಾಸ್ತಿಕಾ ಭಾಟಿಯಾ ಅವರು ಚೆಂಡನ್ನೇ ನೋಡುತ್ತಾ (ಬಾಲ್-ವಾಚಿಂಗ್) ನಿಧಾನವಾಗಿ ಓಡಿದ್ದರಿಂದ ಎರಡನೇ ರನ್ ಪೂರ್ಣಗೊಳಿಸಲು ಸಾಧ್ಯವಾಗದೆ ಚಾರ್ಲಿ ನಾಟ್ ರನೌಟ್ ಆಗಬೇಕಾಯಿತು.
ಕಾಮೆಂಟೇಟರ್‌ಗಳ ಆಕ್ರೋಶ
ಯಾಸ್ತಿಕಾ ಅವರ ಈ ನಿರ್ಲಕ್ಷ್ಯದ ಓಟ ಕಾಮೆಂಟೇಟರ್‌ಗಳ ಅಸಮಾಧಾನಕ್ಕೆ ಕಾರಣವಾಯಿತು. ನೇರಪ್ರಸಾರದ ವೇಳೆ ಕಾಮೆಂಟೇಟರ್, “ಇದು ಬ್ರಿಸ್ಬೇನ್ ಹೀಟ್ ಹಾಗೂ ಯಾಸ್ತಿಕಾ ಭಾಟಿಯಾ ಅವರಿಂದ ನಡೆದ ಅಕ್ಷಮ್ಯ ಅಪರಾಧ. ಚಾರ್ಲಿ ನಾಟ್ ಸುಲಭವಾಗಿ ಎರಡು ರನ್ ಪೂರ್ಣಗೊಳಿಸಬಹುದಿತ್ತು. ಆದರೆ ಚೆಂಡು ಆಫ್-ಸೈಡ್‌ಗೆ ಹೋಗುತ್ತಿರುವಾಗ ಯಾಸ್ತಿಕಾ ಕೇವಲ ಜಾಗಿಂಗ್ ಮಾಡುತ್ತಿರುವಂತೆ ಓಡುತ್ತಿದ್ದರು,” ಎಂದು ತೀವ್ರವಾಗಿ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ಯಾಸ್ತಿಕಾ ಅವರ ಕಳಪೆ ಓಟದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಯಾಸ್ತಿಕಾಗೆ ಕಳಪೆ ಫಾರ್ಮ್ ಕಾಟ
ಚಾರ್ಲಿ ನಾಟ್ ಅವರ ಶತಕದ ನೆರವಿನಿಂದ ಬ್ರಿಸ್ಬೇನ್ ಹೀಟ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿ 14 ರನ್‌ಗಳ ಜಯ ಸಾಧಿಸಿತು. ಇದು ಬ್ರಿಸ್ಬೇನ್ ತಂಡಕ್ಕೆ ಕಳೆದ 706 ದಿನಗಳ ಬಳಿಕ ಸಿಕ್ಕ ಮೊದಲ ಡಬ್ಲ್ಯುಬಿಬಿಎಲ್ ಗೆಲುವಾಗಿದೆ. ಆದರೆ ಈ ಪಂದ್ಯದಲ್ಲಿ ಯಾಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಋತುವಿನಲ್ಲಿ ಬ್ರಿಸ್ಬೇನ್ ಪರ ಕಣಕ್ಕಿಳಿದಿರುವ ಯಾಸ್ತಿಕಾ ಆರಂಭಿಕ ಪಂದ್ಯಗಳಲ್ಲಿ ಮಿಂಚಲು ವಿಫಲರಾಗಿದ್ದಾರೆ. ನವೆಂಬರ್ 1ರಂದು ಸಿಡ್ನಿ ಥಂಡರ್ಸ್ ವಿರುದ್ಧ ಕೇವಲ 1 ರನ್ ಗಳಿಸಿ ಔಟಾಗಿದ್ದ ಅವರು, ಅಕ್ಟೋಬರ್ 28ರಂದು ಜಿಂಬಾಬ್ವೆ ವಿರುದ್ಧ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲೂ ಗೋಲ್ಡನ್ ಡಕ್ ಆಗಿದ್ದರು. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಯಾಸ್ತಿಕಾ, ಮುಂದಿನ ಪಂದ್ಯಗಳಲ್ಲಿ ಲಯಕ್ಕೆ ಮರಳುವ ಒತ್ತಡದಲ್ಲಿದ್ದಾರೆ.



















