ಜಿಬಿಎ ಕಚೇರಿಯಲ್ಲಿ 44 ಕೋಟಿ ರೂಪಾಯಿ ಭಾರೀ ಹಣ ದುರುಪಯೋಗವಾಗಿದೆ ಎಂದು ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಜಿಬಿಎ ನೌಕರ ಎನ್. ರವಿ ಕುಮಾರ್ ಕೇವಲ 3 ವರ್ಷಗಳಲ್ಲಿ ಕುಟುಂಬಸ್ಥರ ಹೆಸರಿನಲ್ಲಿ 6 ನಕಲಿ ಕಂಪನಿಗಳನ್ನು ಸೃಷ್ಟಿಸಿ, ಕಂಪ್ಯೂಟರ್-ಪ್ರಿಂಟರ್ ಪೂರೈಕೆ, ಬ್ಲೀಚಿಂಗ್ ಪೌಡರ್ ಹೆಸರಲ್ಲಿ 15 ಕೋಟಿ ಹಾಗೂ ಸೆಕ್ಯೂರಿಟಿ ಡೆಪಾಸಿಟ್ ಹೆಸರಲ್ಲಿ 1.5 ಕೋಟಿ ರೂ. ವಂಚಿಸಿದ್ದಾನೆ ಎಂದು ದೂರಿದ್ದಾರೆ.
ಒಂದೇ ಕಚೇರಿಗೆ 113 ಬಾರಿ ಕಂಪ್ಯೂಟರ್ ಪೂರೈಸಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದ್ದು, ನಾಲ್ಕು ವಲಯಗಳ 4 ಕಾರ್ಯಪಾಲಕ ಅಭಿಯಂತರರು ಹಾಗೂ 4 ಆರೋಗ್ಯಾಧಿಕಾರಿಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈ ಹಗರಣದ ವಿರುದ್ಧ ದಾಖಲೆ ಸಮೇತ ಲೋಕಾಯುಕ್ತ, ಇಡಿ ಹಾಗೂ ಸಚಿವ ಕೃಷ್ಣ ಬೈರೇಗೌಡರಿಗೆ ದೂರು ನೀಡಲಾಗಿದ್ದು, ಆರೋಪಿ ನೌಕರನ ಅಮಾನತು, ತನಿಖೆ ಹಾಗೂ ಆಸ್ತಿ ಜಪ್ತಿಗೆ ಆಗ್ರಹಿಸಲಾಗಿದೆ.


















