KLE Degree College Nagarabhavi to Host ‘VYBE 2K26’ Inter-College Fest Celebrating 110th Anniversary
ಬೆಂಗಳೂರು: ಶಿಕ್ಷಣ ಮತ್ತು ಸಮಾಜ ಸೇವೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ಐತಿಹಾಸಿಕ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ (KLE) ಇದೀಗ ತನ್ನ 110ನೇ ವರ್ಷದ ಸಂಭ್ರಮದಲ್ಲಿದೆ. 300ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನದ ದೀಪ ಬೆಳಗಿಸುತ್ತಿರುವ KLE ಬಳಗದಲ್ಲಿ ಈ ಮೈಲಿಗಲ್ಲಿನ ಸಂಭ್ರಮ ಮನೆಮಾಡಿದೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಬೆಂಗಳೂರಿನ ನಾಗರಭಾವಿಯ KLE ಪದವಿ ಕಾಲೇಜು ಸಜ್ಜಾಗಿದೆ. ಕಾಲೇಜಿನ ವತಿಯಿಂದ ನವೆಂಬರ್ 4, 5 ಮತ್ತು 6ರಂದು ಮೂರು ದಿನಗಳ ಬೃಹತ್ ಅಂತರ್ ಕಾಲೇಜು ಉತ್ಸವ ‘VYBE 2K26’ ಆಯೋಜಿಸಲಾಗಿದೆ.

ಈ ಯುವ ಉತ್ಸವವು ಕೇವಲ ಮನರಂಜನೆಗೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಸೃಜನಶೀಲತೆ, ತಾಂತ್ರಿಕ ಜ್ಞಾನ ಮತ್ತು ನಾಯಕತ್ವದ ಗುಣಗಳನ್ನು ಅನಾವರಣಗೊಳಿಸುವ ವೇದಿಕೆಯಾಗಲಿದೆ. ಬೆಂಗಳೂರಿನ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ರಾಜೇಶ್ ಕೃಷ್ಣನ್ ಲೈವ್ ಕಾನ್ಸರ್ಟ್, ಅತ್ಯಾಧುನಿಕ ರೋಬೋಟ್‌ಗಳು
‘VYBE 2K26’ರ ಪ್ರಮುಖ ಆಕರ್ಷಣೆ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಲೈವ್ ಸಂಗೀತ ಕಾರ್ಯಕ್ರಮ. ಈ ಕಾರ್ಯಕ್ರಮದ ಟಿಕೆಟ್‌ಗಳು ಈಗಾಗಲೇ BookMyShow ವೇದಿಕೆಯಲ್ಲಿ ಲಭ್ಯವಿವೆ.
ಉತ್ಸವದಲ್ಲಿ ತಂತ್ರಜ್ಞಾನಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ. ಮೂರು ಅತ್ಯಾಧುನಿಕ ರೋಬೋಟ್‌ಗಳು ಕ್ಯಾಂಪಸ್‌ಗೆ ಆಗಮಿಸಲಿದ್ದು, ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಹನ ನಡೆಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನೂ ಒದಗಿಸಲಿವೆ.

6 ವಿಭಾಗಗಳು, 30ಕ್ಕೂ ಅಧಿಕ ಸ್ಪರ್ಧೆಗಳು
KLE ಸಂಸ್ಥೆಯ ಶೈಕ್ಷಣಿಕ ಪರಂಪರೆ ಹಾಗೂ ಸಂಸ್ಥಾಪಕರಾದ ‘ಸಪ್ತರ್ಷಿ’ಗಳ ದೂರದೃಷ್ಟಿ ಮತ್ತು ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ಉತ್ಸವವನ್ನು ಅವರಿಗೆ ಗೌರವಪೂರ್ವಕವಾಗಿ ಸಮರ್ಪಿಸಲಾಗಿದೆ.
ಉತ್ಸವವನ್ನು ಮ್ಯಾನೇಜ್‌ಮೆಂಟ್, ಕಾಮರ್ಸ್, ಟೆಕ್ನಿಕಲ್, ಕಲ್ಚರಲ್, ಕ್ರಿಯೇಟಿವ್ ಆರ್ಟ್ಸ್ ಹಾಗೂ ಲೈವ್ ಕಾನ್ಸರ್ಟ್ ಎಂಬ ಆರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ವಿಭಾಗಗಳ ಅಡಿಯಲ್ಲಿ 30ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ಕಾಲೇಜಿನ ಆವರಣದಲ್ಲಿ ವಿವಿಧ ಆಕರ್ಷಕ ಸ್ಟಾಲ್‌ಗಳೂ ಇರಲಿವೆ.

ನಟಿ ತಪಸ್ವಿನಿ ಪೂಣಚ್ಚ ಭಾಗಿ
ಈ ಅದ್ಧೂರಿ ಉತ್ಸವಕ್ಕೆ ಸ್ಯಾಂಡಲ್‌ವುಡ್ ನಟಿ ‘ಪ್ರೇಮದ ಊರಲಿ’ ಸಿನಿಮಾ ಖ್ಯಾತಿಯ ತಪಸ್ವಿನಿ ಪೂಣಚ್ಚ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮದನ್‌ಕುಮಾರ್ ಆರ್., ಬಿಬಿಎ ವಿಭಾಗದ ಸಂಯೋಜಕರಾದ ಪ್ರೊ. ಕಲ್ಪನಾ ಮಲ್ಲಿಕಾರ್ಜುನ, ಬಿಸಿಎ ವಿಭಾಗದ ಸಂಯೋಜಕರಾದ ಡಾ. ಪಾರ್ವತಿ ಎನ್. ಅಂಗಡಿ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವುದು, ಹೊಸ ಆಲೋಚನೆಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಸ್ನೇಹದ ವಾತಾವರಣ ನಿರ್ಮಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.


















