ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-2 ಅಂತರದಿಂದ ಜಯಿಸಿದೆ. ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಭಾರತ, ಕೊನೆಯ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಯುವ ಹಾಗೂ ಅನುಭವವಿಲ್ಲದ ಬೌಲಿಂಗ್ ಪಡೆಯನ್ನು ಇಟ್ಟುಕೊಂಡು ಸರಣಿ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.ಈ ಗೆಲುವು ಕೇವಲ ಅಂಕಿ-ಅಂಶಗಳ ಆಧಾರದ ಮೇಲಷ್ಟೇ ಅಲ್ಲದೆ, ಯಾವ ಪರಿಸ್ಥಿತಿಯಲ್ಲಿ ಸರಣಿ ಜಯಿಸಿದ್ದಾರೆ ಎನ್ನುವುದು ಕೂಡ ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅನುಭವವಿಲ್ಲದ ಬೌಲಿಂಗ್ ಪಡೆಯೊಂದಿಗೆ ಗೆಲುವು
ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, “ನಾಯಕತ್ವದಲ್ಲಿ ಅಯ್ಯರ್ ಅದ್ಭುತವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜವಾಬ್ದಾರಿ ವಹಿಸಿಕೊಂಡಾಗ ಟಿ20 ವಿಶ್ವಕಪ್ ಗೆದ್ದಿದ್ದ ಹಾಗೂ ಎರಡು ವರ್ಷಗಳಿಂದ ಯಾವುದೇ ಸರಣಿ ಸೋಲದ ಅತ್ಯಂತ ಯಶಸ್ವಿ ತಂಡವನ್ನು ಮುನ್ನಡೆಸುವ ಸವಾಲಿತ್ತು. ಜೊತೆಗೆ ತಂಡದಲ್ಲಿ ಅನೇಕ ಯುವ ಆಟಗಾರರಿದ್ದರು. ಬೌಲಿಂಗ್ ವಿಭಾಗದಲ್ಲಿ ನಮ್ಮಲ್ಲಿ ಸಾಕಷ್ಟು ಅನುಭವದ ಕೊರತೆಯಿತ್ತು. ಇಂತಹ ಪರಿಸ್ಥಿತಿಯಲ್ಲೂ ಇಷ್ಟು ದೊಡ್ಡ ಯಶಸ್ಸು ಸಾಧಿಸಿರುವುದು ಅವರ ನಾಯಕತ್ವದ ಕೌಶಲ್ಯವನ್ನು ತೋರಿಸುತ್ತದೆ” ಎಂದು ಹೊಗಳಿದ್ದಾರೆ. ಕೇವಲ ಗೆಲುವು-ಸೋಲಿನ ಲೆಕ್ಕಾಚಾರದಿಂದ ನಾಯಕನನ್ನು ಅಳೆಯಬಾರದು ಎಂದು ಗಂಭೀರ್ ತಿಳಿಸಿದ್ದಾರೆ.
ಆಕ್ರಮಣಕಾರಿ ಆಟಕ್ಕೆ ಆದ್ಯತೆ
ಟಿ20 ಮಾದರಿಯಲ್ಲಿ ಭಾರತ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಗಂಭೀರ್ ಸಮರ್ಥಿಸಿಕೊಂಡಿದ್ದಾರೆ. “ನಾವು ಕಳೆದ ಎರಡೂವರೆ ವರ್ಷಗಳಿಂದ ಇದೇ ರೀತಿಯ ಕ್ರಿಕೆಟ್ ಆಡುತ್ತಿದ್ದೇವೆ. ಇದು ಹೆಚ್ಚು ರಿಸ್ಕ್ ಇರುವ ಆಟವಾದರೂ, ಫಲಿತಾಂಶವೂ ಅದೇ ರೀತಿಯಲ್ಲಿ ಇರುತ್ತದೆ. ಕೆಲವೊಮ್ಮೆ ನಾವು ಏಕಪಕ್ಷೀಯವಾಗಿ ಪಂದ್ಯಗಳನ್ನು ಸೋಲಬಹುದು, ಮುಂದೆಯೂ ಸೋಲಬಹುದು. ಆದರೆ ನಮ್ಮ ಆಟದ ಶೈಲಿ ಮತ್ತು ಸಿದ್ಧಾಂತ ಬದಲಾಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಭಾರತ, ಯಾವುದೇ ದೇಶದಲ್ಲಿ ಆಡಿದರೂ ಆಕ್ರಮಣಕಾರಿ ಆಟವನ್ನೇ ಮುಂದುವರಿಸುವುದಾಗಿ ಗಂಭೀರ್ ಹೇಳಿದ್ದಾರೆ.
ಕಲಿಕೆಯ ಅವಕಾಶ ಎಂದ ಅಯ್ಯರ್
ಸರಣಿಯ ಗೆಲುವಿನ ಬಗ್ಗೆ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಈ ಪ್ರವಾಸವು ಉತ್ತಮ ಕಲಿಕೆಯ ಅವಕಾಶ ಒದಗಿಸಿದೆ ಎಂದರು. “ನ್ಯೂಜಿಲೆಂಡ್ನಂತಹ ಭಿನ್ನ ಹವಾಮಾನ ಹಾಗೂ ವಿಭಿನ್ನ ಮೈದಾನಗಳಲ್ಲಿ ಆಡುವುದು ದೊಡ್ಡ ಸವಾಲು. ಮೊದಲ ಮೂರು ಪಂದ್ಯಗಳು ನಮಗೆ ಉತ್ತಮ ಲಯ ಒದಗಿಸಿದವು. ಕೊನೆಯ ಎರಡು ಪಂದ್ಯಗಳಲ್ಲಿ ಮಧ್ಯಮ ಓವರ್ಗಳಲ್ಲಿ ಉತ್ತಮ ಆರಂಭ ಪಡೆದರೂ, ಸತತ ವಿಕೆಟ್ ಕಳೆದುಕೊಂಡಿದ್ದರಿಂದ ಹಿನ್ನಡೆಯಾಯಿತು. ಆದರೂ, ಈ ಸರಣಿ ಜಯ ಯುವ ಆಟಗಾರರಿಗೆ ದೊಡ್ಡ ಆತ್ಮವಿಶ್ವಾಸ ನೀಡಿದೆ” ಎಂದು ಅಯ್ಯರ್ ತಿಳಿಸಿದ್ದಾರೆ.


















