ನವದೆಹಲಿ: ರಾಜಧಾನಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಇಂದು ‘ಇಂಡಿಯಾ’ (INDIA) ಮೈತ್ರಿಕೂಟ ಆಯೋಜಿಸಿರುವ ಬೃಹತ್ ಪ್ರತಿಭಟನಾ ರ್ಯಾಲಿಯಿಂದ ದೀಪಾವಳಿ ಹಬ್ಬದ ವ್ಯಾಪಾರ-ವಹಿವಾಟಿಗೆ ಧಕ್ಕೆಯಾಗಲಿದೆ ಎಂಬ ವರ್ತಕರ ಸಂಘಟನೆಗಳ ಆತಂಕಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಲು ದೇಶದ ನಾನಾ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರು ದೆಹಲಿಯ ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳಿಗೆ ಬೆಂಬಲ ನೀಡಬೇಕೆಂದು ಅವರು ಬಹಿರಂಗವಾಗಿ ಮನವಿ ಮಾಡಿದ್ದಾರೆ.
“ಬಿಜೆಪಿ ವದಂತಿ ಹಬ್ಬಿಸುತ್ತಿದೆ”: ವ್ಯಾಪಾರಿಗಳ ಪರ ರಾಹುಲ್ ಬ್ಯಾಟಿಂಗ್
ಸಾಮಾಜಿಕ ಜಾಲತಾಣ ‘ಎಕ್ಸ್’ (X)ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರತಿಭಟನೆಯಿಂದ ವ್ಯಾಪಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ವಿಪಕ್ಷಗಳಿಂದ ಬೃಹತ್ ಮೆರವಣಿಗೆ ಮತ್ತು ರ್ಯಾಲಿ ನಡೆಯಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವವರು, ಇದರ ಜೊತೆಗೆ ಸ್ಥಳೀಯ ಸಣ್ಣ ಸಣ್ಣ ಅಂಗಡಿಗಳಲ್ಲಿ ಸ್ವಲ್ಪ ಶಾಪಿಂಗ್ ಕೂಡ ಮಾಡಿ, ಇದರಿಂದ ದೆಹಲಿಯ ವರ್ತಕರಿಗೆ ಹೆಚ್ಚಿನ ಅನುಕೂಲವಾಗಲಿದೆ,” ಎಂದು ದೀಪಾವಳಿ ಶುಭಾಶಯಗಳೊಂದಿಗೆ ತಿಳಿಸಿದ್ದಾರೆ. ಪ್ರತಿಭಟನೆಯಿಂದ ತೊಂದರೆಯಾಗಲಿದೆ ಎಂದು ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದ್ದು, ಆ ಭಯಕ್ಕೆ ಆಸ್ಪದ ನೀಡದೆ ರ್ಯಾಲಿ ಮತ್ತು ಖರೀದಿ ಎರಡನ್ನೂ ಒಟ್ಟಿಗೆ ನಡೆಸೋಣ ಎಂದು ಅವರು ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ದಿನಕ್ಕೆ 12,000 ಕೋಟಿ ರೂ. ನಷ್ಟದ ಭೀತಿ:
ಹಬ್ಬದ ಸೀಸನ್ನಲ್ಲಿ ರ್ಯಾಲಿ ಆಯೋಜಿಸಿರುವುದಕ್ಕೆ ದೆಹಲಿಯ ಪ್ರಮುಖ ವರ್ತಕರ ಸಂಘಟನೆಗಳು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿವೆ. ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್, ರಾಹುಲ್ ಗಾಂಧಿ ಅವರಿಗೆ ಸತತ ನಾಲ್ಕನೇ ಪತ್ರ ಬರೆದು ಕಳವಳ ತೋಡಿಕೊಂಡಿದ್ದಾರೆ. ರಾಮ್ಲೀಲಾ ಮೈದಾನದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸುಮಾರು 2.5 ಲಕ್ಷ ಅಂಗಡಿಗಳ ವಹಿವಾಟು ಹಾಗೂ ಸಾರಿಗೆ ವ್ಯವಸ್ಥೆ ಸ್ತಬ್ಧಗೊಳ್ಳುವ ಭೀತಿ ಇದೆ ಎಂದು ಅವರು ಎಚ್ಚರಿಸಿದ್ದಾರೆ. ದೀಪಾವಳಿ ಸೀಸನ್ನಲ್ಲಿ ದೆಹಲಿಯಲ್ಲಿ ದಿನವೊಂದಕ್ಕೆ ಸುಮಾರು 10,000 ಕೋಟಿ ರೂ.ಗಳಿಂದ 12,000 ಕೋಟಿ ರೂ. ವ್ಯಾಪಾರ ನಡೆಯಲಿದ್ದು, ರ್ಯಾಲಿಯಿಂದ ಶೇ. 80ರಷ್ಟು ಮಾರುಕಟ್ಟೆ ಚಟುವಟಿಕೆಗಳು ಕುಸಿಯಲಿವೆ ಎಂದು ಸಿಟಿಐ ಕಳವಳ ವ್ಯಕ್ತಪಡಿಸಿದೆ.
ರ್ಯಾಲಿ ಮುಂದೂಡಿಕೆಗೆ ವ್ಯಾಪಾರಿಗಳ ಆಗ್ರಹ
ಸದರ್ ಬಜಾರ್ ಟ್ರೇಡರ್ಸ್ ಅಸೋಸಿಯೇಷನ್ ಕೂಡ ಕಾಂಗ್ರೆಸ್ ನಾಯಕತ್ವಕ್ಕೆ ಮನವಿ ಸಲ್ಲಿಸಿದ್ದು, ಧನತ್ರಯೋದಶಿಯಿಂದ ದೀಪಾವಳಿಯವರೆಗಿನ ಅವಧಿಯಲ್ಲಿ ಸುಮಾರು 25,000 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂದು ಉಲ್ಲೇಖಿಸಿದೆ. ಈ ಅವಧಿಯು ಸಣ್ಣ ವ್ಯಾಪಾರಿಗಳು, ಕಮಿಷನ್ ಏಜೆಂಟರು, ಶೋರೂಮ್ ಉದ್ಯೋಗಿಗಳು ಹಾಗೂ ದಿನಗೂಲಿ ಕಾರ್ಮಿಕರ ವಾರ್ಷಿಕ ಜೀವನೋಪಾಯಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ ರ್ಯಾಲಿಯನ್ನು ನವೆಂಬರ್ 10ರ ನಂತರ ಆಯೋಜಿಸುವಂತೆ ಮನವಿ ಮಾಡಲಾಗಿತ್ತಾದರೂ, ಮೈತ್ರಿಕೂಟವು ನಿಗದಿತ ವೇಳಾಪಟ್ಟಿಯಂತೆಯೇ ಪ್ರತಿಭಟನೆ ಮುಂದುವರಿಸಿದೆ.
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ‘ಇಂಡಿಯಾ’ ಒಕ್ಕೂಟ ಶಕ್ತಿ ಪ್ರದರ್ಶನ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿರುವ ‘ಇಂಡಿಯಾ’ ಮೈತ್ರಿಕೂಟ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ‘ಚಲೋ ದೆಹಲಿ’ ರ್ಯಾಲಿ ಆಯೋಜಿಸಿದೆ. ವ್ಯಾಪಾರಿಗಳ ಆತಂಕದ ನಡುವೆಯೂ ಬೃಹತ್ ಮಟ್ಟದಲ್ಲಿ ಜನರನ್ನು ಸಜ್ಜುಗೊಳಿಸಿ ವಿಪಕ್ಷಗಳು ಇಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಸಮರ ಸಾರಿವೆ.



















