ವಿಶ್ವವಿದ್ಯಾಲಯಗಳ ವಿಳಂಬ ನೀತಿಯಿಂದಾಗಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೈತಪ್ಪುವ ಭೀತಿ ಎದುರಾಗಿದೆ. ಎಸ್ಎಸ್ಪಿ ಪೋರ್ಟಲ್ನಲ್ಲಿ ವಿದ್ಯಾರ್ಥಿಗಳ ಬೋನಾಫೈಡ್ ಮಾಹಿತಿ ಹಾಗೂ ಯುಯುಸಿಎಂಎಸ್ನಲ್ಲಿ ಡೇಟಾ ಅಪ್ಲೋಡ್ ಮಾಡದ ಹಿನ್ನೆಲೆ, 5ರಿಂದ 6 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗದೆ ಆತಂಕಕ್ಕೆ ಒಳಗಾಗಿದ್ದಾರೆ. ತಾಂತ್ರಿಕ ಶಿಕ್ಷಣ, ಅಲ್ಪಸಂಖ್ಯಾತ ಹಾಗೂ 11ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ತಾಂತ್ರಿಕ ಅಡ್ಡಿ ಉಂಟಾಗಿದ್ದು, ವಿವಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿವೇತನಕ್ಕೆ ನವೆಂಬರ್ 30 ಕೊನೆಯ ದಿನವಾಗಿದೆ. 35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಸ್ಎಸ್ಪಿ ಮೂಲಕ ಸ್ಕಾಲರ್ಶಿಪ್ ತಲುಪಬೇಕಾಗಿದ್ದು, ದಿನಗಣನೆ ಶುರುವಾದರೂ ಮಾಹಿತಿ ಸಲ್ಲಿಕೆ ಪೂರ್ಣಗೊಂಡಿಲ್ಲ. ಸದ್ಯ ವಿದ್ಯಾರ್ಥಿಗಳು ಮಾಹಿತಿ ಅಪ್ಲೋಡ್ ಮಾಡಲು ವಿವಿಗಳಿಗೆ ಒತ್ತಾಯಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಗಮನಕ್ಕೆ ತರಲಾಗಿದೆ.



















