ಬೆಂಗಳೂರು: ಭಾರತದ ಇ-ಕಾಮರ್ಸ್ ದೈತ್ಯ ಸಂಸ್ಥೆಯಾದ ಫ್ಲಿಪ್ ಕಾರ್ಟ್ ಈಗ ದೇಶದ ಆನ್ ಲೈನ್ ಆಹಾರ ವಿತರಣಾ (Food Delivery) ಮಾರುಕಟ್ಟೆಗೆ ಅಧಿಕೃತವಾಗಿ ಕಾಲಿಡಲು ಸಜ್ಜಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಜೊಮ್ಯಾಟೋ, ಸ್ವಿಗ್ಗಿ ಸಂಸ್ಥೆಗಳಿಗೆ ಭರ್ಜರಿ ಪೈಪೋಟಿ ನೀಡಲು ಫ್ಲಿಪ್ ಕಾರ್ಟ್ ‘ಈಟ್-ಇನ್ ಬೈ ಮಿನಿಟ್ಸ್’ (Eat-in by Minutes) ಎಂಬ ಹೊಸ ಸೇವೆಯನ್ನು ಪರಿಚಯಿಸುತ್ತಿದೆ.
ಅಕ್ಟೋಬರ್ ಅಂತ್ಯದೊಳಗೆ ಲೋಕಾರ್ಪಣೆ
ವರದಿಗಳ ಪ್ರಕಾರ, ವಾಲ್ ಮಾರ್ಟ್ ಬೆಂಬಲಿತ ಫ್ಲಿಪ್ ಕಾರ್ಟ್ ಸಂಸ್ಥೆಯು ಈ ಹೊಸ ಆಹಾರ ವಿತರಣಾ ಸೇವೆಯನ್ನು ಅಕ್ಟೋಬರ್ ಅಂತ್ಯದೊಳಗೆ ಸಾರ್ವಜನಿಕ ಬಳಕೆಗಾಗಿ ಮಾರುಕಟ್ಟೆಗೆ ಪರಿಚಯಿಸುವ ಗುರಿ ಹೊಂದಿದೆ. ಆರಂಭಿಕ ಹಂತದಲ್ಲಿ ಇದನ್ನು ಬೆಂಗಳೂರಿನಲ್ಲಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಹಲವು ನಗರಗಳಿಗೆ ವಿಸ್ತರಿಸುವ ಯೋಜನೆ ಇದೆ.
ಪ್ರಮುಖ ವಿಶೇಷತೆಗಳು ಮತ್ತು ಕಾರ್ಯನಿರ್ವಹಣೆ ಹೇಗೆ?
ಅಪ್ಲಿಕೇಶನ್ ನಲ್ಲಿ ಪ್ರತ್ಯೇಕ ಟ್ಯಾಬ್: ಬಳಕೆದಾರರು ಪ್ರತ್ಯೇಕ ಆ್ಯಪ್ ಡೌನ್ ಲೋಡ್ ಮಾಡುವ ಅಗತ್ಯವಿಲ್ಲ. ಫ್ಲಿಪ್ ಕಾರ್ಟ್ ನ ಮುಖ್ಯ ಆ್ಯಪ್ ನಲ್ಲೇ ‘ಮಿನಿಟ್ಸ್’ ಮತ್ತು ಟ್ರಾವೆಲ್ ವಿಭಾಗಗಳ ಜತೆಗೆ ಈ ‘ಈಟ್-ಇನ್’ ಗಾಗಿ ಪ್ರತ್ಯೇಕ ಟ್ಯಾಬ್ ಲಭ್ಯವಿರಲಿದೆ. ಆರಂಭದಲ್ಲಿ ಕೆಲವೇ ಕೆಲವು ನೌಕರರೊಂದಿಗೆ ಸೀಮಿತವಾಗಿದ್ದ ಈ ಸೇವೆಯ ಆಂತರಿಕ ಪರೀಕ್ಷೆಯನ್ನು ಸುಮಾರು 8,000ಕ್ಕೂ ಹೆಚ್ಚು ಫ್ಲಿಪ್ ಕಾರ್ಟ್ ಉದ್ಯೋಗಿಗಳೊಂದಿಗೆ ಯಶಸ್ವಿಯಾಗಿ ನಡೆಸಲಾಗುತ್ತಿದೆ.
ರಿಯಾಯಿತಿಗಳು ಮತ್ತು ರಿವಾರ್ಡ್ಗಳು: ಗ್ರಾಹಕರು ಫ್ಲಿಪ್ ಕಾರ್ಟ್ ಆ್ಯಪ್ ನ ಮೂಲಕ ಸುಲಭವಾಗಿ ಆಹಾರ ಆರ್ಡರ್ ಮಾಡಲು ಆಕರ್ಷಕ ರಿಯಾಯಿತಿಗಳು ಮತ್ತು ‘ಸೂಪರ್ಕಾಯಿನ್ಸ್’ ಸೌಲಭ್ಯಗಳನ್ನು ಒದಗಿಸಲು ಕಂಪನಿ ಯೋಜಿಸಿದೆ. ರಾಷ್ಟ್ರೀಯ ರೆಸ್ಟೋರೆಂಟ್ ಸಂಘಟನೆಯ ಮಾಹಿತಿಯ ಪ್ರಕಾರ, ಫ್ಲಿಪ್ ಕಾರ್ಟ್ ರೆಸ್ಟೋರೆಂಟ್ ಗಳಿಗೆ ಕಡಿಮೆ ಕಮಿಷನ್ ಮಾದರಿಯನ್ನು ಪರಿಚಯಿಸುವ ಸಾಧ್ಯತೆಯಿದ್ದು, ಇದು ಆಹಾರ ಉದ್ಯಮಿಗಳಿಗೂ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.


















