ಮುಂಬಯಿ: ಭಾನುವಾರ ಸಂಜೆ 7 ಗಂಟೆ. ಮುಂಬೈನ ಪ್ರತಿಷ್ಠಿತ ಜುಹು ಪ್ರದೇಶ. ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರು ಸಾಗುತ್ತಿದ್ದಂತೆ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳಿಂದ ಏಕಾಏಕಿ ಗುಂಡಿನ ದಾಳಿ. ಕ್ಷಣಾರ್ಧದಲ್ಲಿ ನಡೆದ ಈ ಕೃತ್ಯದ ಬಳಿಕ ಆರೋಪಿಗಳು ತಪ್ಪಿಸಿಕೊಂಡ ದಾರಿ ಮತ್ತು ಪೊಲೀಸರ ಕಾರ್ಯಾಚರಣೆ ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ. ನಾಲ್ಕು ರಾಜ್ಯಗಳನ್ನು ಸುತ್ತಿ ನೇಪಾಳಕ್ಕೆ ಪರಾರಿಯಾಗುವ ಹೊಸ್ತಿಲಲ್ಲಿದ್ದ ಮೂವರು ಶೂಟರ್ಗಳನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ರಾಜಸ್ಥಾನದ ಕೋಟಾದಲ್ಲಿ ಹೆಡೆಮುರಿಕಟ್ಟಿದ್ದಾರೆ.
ದಾಳಿಕೋರರಾದ ಫೂಲ್ ಸಿಂಗ್ ಮತ್ತು ರೆಹಾನ್ ಎರಡು ಶಸ್ತ್ರಾಸ್ತ್ರಗಳನ್ನು ಹಿಡಿದು ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ಮಳೆಗರೆಯಲು ಮುಂದಾಗಿದ್ದರು. ಆದರೆ, ಕೃತ್ಯದ ವೇಳೆ ಫೂಲ್ ಸಿಂಗ್ ಬಳಿಯಿದ್ದ ಆಯುಧ ಕೈಕೊಟ್ಟಿತು. ಕೃತ್ಯ ಎಸಗಿದ ಕೂಡಲೇ ಮೂವರೂ ಬೈಕ್ ಹತ್ತಿ ಅಂಧೇರಿ ವೆಸ್ಟ್ ಕಡೆಗೆ ಪರಾರಿಯಾದರು. ಯಾರಿಗೂ ಅನುಮಾನ ಬಾರದಂತೆ ಅಲ್ಲಿಯೇ ಬೈಕ್ ಅನ್ನು ಅನಾಥವಾಗಿ ಬಿಟ್ಟು ಮುಂದಿನ ಪ್ರಯಾಣ ಆರಂಭಿಸಿದರು.
ಮುಂಬೈ-ಸೂರತ್-ಕೋಟಾ: ಪರ್ಫೆಕ್ಟ್ ಎಸ್ಕೇಪ್ ಪ್ಲ್ಯಾನ್
ಅಂಧೇರಿ ವೆಸ್ಟ್ ರೈಲು ನಿಲ್ದಾಣದಿಂದ ಲೋಕಲ್ ಟ್ರೈನ್ ಹತ್ತಿದ ಆರೋಪಿಗಳು ಬೊರಿವಲಿ ತಲುಪಿದರು. ಅಲ್ಲಿಂದ ರಿತಿಕ್ ಎಂಬಾತನ ಹೆಸರಿನಲ್ಲಿ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ನೇರವಾಗಿ ಗುಜರಾತ್ನ ಸೂರತ್ಗೆ ಪ್ರಯಾಣ ಬೆಳೆಸಿದರು. ಸೂರತ್ನಿಂದ ಪುಣೆ-ಜೈಪುರ ಎಕ್ಸ್ಪ್ರೆಸ್ ರೈಲೇರಿದ ಈ ಮೂವರ ಅಂತಿಮ ಗುರಿ ನೇಪಾಳವಾಗಿತ್ತು. ಜೈಪುರದಿಂದ ಬಸ್ ಮೂಲಕ ದೆಹಲಿಗೆ ತೆರಳಿ, ಅಲ್ಲಿಂದ ನೇಪಾಳದ ಗಡಿ ದಾಟುವ ನಿಖರ ಯೋಜನೆ ಅವರದ್ದಾಗಿತ್ತು.
ಸಿಸಿಟಿವಿ ನೀಡಿದ ಸುಳಿವು ಮತ್ತು 20 ವಿಶೇಷ ತಂಡಗಳ ಭೇಟೆ
ಆರೋಪಿಗಳು ಕಣ್ಮರೆಯಾಗುತ್ತಿದ್ದಂತೆ ಮುಂಬೈ ಕ್ರೈಂ ಬ್ರಾಂಚ್ 20 ವಿಶೇಷ ತಂಡಗಳನ್ನು ಅಖಾಡಕ್ಕಿಳಿಸಿತು. ಅಂಧೇರಿ ವೆಸ್ಟ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಜೆ 7.06ರ ಸುಮಾರಿಗೆ ಯುಎಸ್ಪಿಎ ಟಿ-ಶರ್ಟ್ ಧರಿಸಿದ್ದ ರಿತಿಕ್, ಆತನ ಪಕ್ಕದಲ್ಲಿದ್ದ ಫೂಲ್ ಸಿಂಗ್ ಮತ್ತು ಕ್ಯಾಪ್ ಹಾಕಿದ್ದ ರೆಹಾನ್ ಪೊಲೀಸರ ಕಣ್ಣಿಗೆ ಬಿದ್ದರು. ತಕ್ಷಣವೇ ಕ್ಯಾಬ್ ಬುಕ್ಕಿಂಗ್ ಮತ್ತು ರೈಲು ಪ್ರಯಾಣದ ತಾಂತ್ರಿಕ ಜಾಡು ಹಿಡಿದ ಪೊಲೀಸರು, ರಾಜಸ್ಥಾನ, ಗುಜರಾತ್ ಮತ್ತು ದೆಹಲಿ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದರು. ಅವರು ಪ್ರಯಾಣಿಸುತ್ತಿದ್ದ ಬೋಗಿಯನ್ನು ಪತ್ತೆ ಹಚ್ಚಿ, ಕೋಟಾ ರೈಲು ನಿಲ್ದಾಣದಲ್ಲಿಯೇ ಮೂವರನ್ನೂ ನಾಟಕೀಯವಾಗಿ ವಶಕ್ಕೆ ಪಡೆಯಲಾಯಿತು.
ನಿಗೂಢ ಬೈಕ್ ಮತ್ತು ಉತ್ತರ ಸಿಗದ ಪ್ರಶ್ನೆಗಳು
ಗುಂಡಿನ ದಾಳಿಗೆ ಬಳಸಿದ ಬೈಕ್ ಅನ್ನು ಸೆಪ್ಟೆಂಬರ್ 11 ರಂದು ಆರೋಪಿ ರಿತಿಕ್ ಖರೀದಿಸಿದ್ದ. 2022 ರಿಂದ ಈ ಬೈಕ್ ಅಧಿಕೃತ ದಾಖಲೆಗಳಿಲ್ಲದೆ ನಾಲ್ಕು ಬಾರಿ ಕೈಬದಲಾಗಿದೆ. ಹರಿಯಾಣ ಮತ್ತು ಬಿಹಾರ ಮೂಲದ ಈ 18 ರಿಂದ 22 ವರ್ಷದ ಯುವಕರಿಗೆ ಟೈಗರ್ ಶ್ರಾಫ್ ಅವರ ನಿಖರ ಲೊಕೇಶನ್ ಕೊಟ್ಟವರು ಯಾರು? ಈ ಕೃತ್ಯದ ಹಿಂದಿರುವ ಮಾಸ್ಟರ್ ಮೈಂಡ್ ಯಾರು? ಎಂಬ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ. ಘಟನೆಗೂ ಮುನ್ನ ನಟನಿಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲದಿರುವುದು ಪ್ರಕರಣದ ಕೌತುಕವನ್ನು ಮತ್ತಷ್ಟು ಹೆಚ್ಚಿಸಿದೆ.



















