ಮುಂಬೈ: ವಾಣಿಜ್ಯ ನಗರಿ ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಿಂದ ಬಾಲಿವುಡ್ ನಟ ಟೈಗರ್ ಶ್ರಾಫ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಧ್ವನಿ ಸಂದೇಶವೊಂದು ವೈರಲ್ ಆಗಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಭಾರೀ ಆತಂಕ ಮೂಡಿಸಿದೆ.
ಟೈಗರ್ ಶ್ರಾಫ್ ಅವರು ಫುಟ್ಬಾಲ್ ಮೈದಾನದಿಂದ ಹೊರಡುತ್ತಿದ್ದ ವೇಳೆ ಮೋಟಾರ್ ಸೈಕಲ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಈ ಘಟನೆಯಲ್ಲಿ ನಟನ ಚಾಲಕನ ಕೈಗೆ ಗಾಯವಾಗಿದೆ.
ಟೈಗರ್ ಶ್ರಾಫ್ ಗುರಿಯಾಗಲು ಕಾರಣವೇನು?
ನಟ ಸಲ್ಮಾನ್ ಖಾನ್ ಜೊತೆ ನಂಟು ಹೊಂದಿರುವ ಮತ್ತು ಗ್ಯಾಂಗ್ನ ಎಚ್ಚರಿಕೆಯನ್ನು ಲೆಕ್ಕಿಸದೆ ಅವರೊಂದಿಗೆ ಕೆಲಸ ಮುಂದುವರಿಸಿರುವ ಕಾರಣಕ್ಕಾಗಿಯೇ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಆ ಆಡಿಯೋ ಸಂದೇಶದಲ್ಲಿ ಹೇಳಿಕೊಳ್ಳಲಾಗಿದೆ. ಅನಿಲ್ ಪಂಡಿತ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾನೆ. ’ನಾವು ಇವರಿಗೆ ಮೊದಲೇ ಕರೆ ಮಾಡಿ ವಿವರಿಸಿದ್ದೆವು, ಆದರೆ ಇವರಿಗೆ ಅರ್ಥವಾಗಲಿಲ್ಲ. ಹಾಗಾಗಿ ಇಂದು ಸರಿಯಾದ ಪಾಠ ಕಲಿಸಿದ್ದೇವೆ’ ಎಂದು ಆಡಿಯೋದಲ್ಲಿ ಬೆದರಿಕೆ ಹಾಕಲಾಗಿದೆ.
ಸಲ್ಮಾನ್ ಖಾನ್, ಚಿತ್ರರಂಗಕ್ಕೆ ನೇರ ಎಚ್ಚರಿಕೆ
ಸಲ್ಮಾನ್ ಖಾನ್ ಜೊತೆ ಗುರುತಿಸಿಕೊಂಡಿರುವ ಎಲ್ಲರಿಗೂ ಜೀವಭಯ ಖಚಿತ ಎಂದು ಗ್ಯಾಂಗ್ ಎಚ್ಚರಿಕೆ ನೀಡಿದೆ. ಸಲ್ಮಾನ್ ಖಾನ್ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸದಿದ್ದರೆ ಅವರ ಕುಟುಂಬದ ಸದಸ್ಯರನ್ನು ಹಾಗೂ ಸಾಕು ನಾಯಿಗಳನ್ನೂ ಬಿಡುವುದಿಲ್ಲ ಎಂದು ಆಡಿಯೋದಲ್ಲಿ ಆಕ್ರೋಶ ಹೊರಹಾಕಲಾಗಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯ್ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂಬ ಕಾರಣಕ್ಕೆ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.
ಸರ್ಕಾರದ ಕ್ರಮವೇನು?
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸ್ ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ತನಿಖೆಯನ್ನು ಚುರುಕುಗೊಳಿಸಿ, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: 1.15 ಲಕ್ಷ ರೂ. ಸ್ಯಾಲರಿ



















