ರಾಯಚೂರು:ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ತಿರುವಿನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ. ಲಾರಿ ಉರುಳಿಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಮಾನವೀಯತೆ ಮರೆತು ಚೀಲಗಟ್ಟಲೆ ಈರುಳ್ಳಿ ಕದಿಯಲು ಮುಗಿಬಿದ್ದಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲೂ ಸಹಾಯ ಮಾಡದ ಸಾರ್ವಜನಿಕರು, ಕೇವಲ 15 ನಿಮಿಷದಲ್ಲಿ ಒಂದು ದೊಡ್ಡ ಲಾರಿಯ ಈರುಳ್ಳಿ ಲೋಡ್ ಖಾಲಿ ಮಾಡಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



















