ಮುಂಬೈ: ಬಾಲಿವುಡ್ ಖ್ಯಾತ ನಟ ಅಜಯ್ ದೇವ್ಗನ್ ಅವರಿಗೆ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಭಾರೀ ಶಾಕ್ ಕೊಟ್ಟಿದೆ. ಮುಂಬೈನ ಪ್ರತಿಷ್ಠಿತ ಜುಹೂ ಪ್ರದೇಶದಲ್ಲಿರುವ ಅವರ ಐಷಾರಾಮಿ ಬಂಗ್ಲೆಯ ಅನಧಿಕೃತ ಭಾಗವನ್ನು ಅಧಿಕಾರಿಗಳು ಬುಲ್ಡೋಜರ್ ಹಾಗೂ ಸುತ್ತಿಗೆಯಿಂದ ಧ್ವಂಸಗೊಳಿಸಿದ್ದಾರೆ. ಯಾವುದೇ ಮುನ್ಸೂಚನೆ ಹಾಗೂ ಅನುಮತಿಯಿಲ್ಲದೆ ಬಂಗ್ಲೆಯಲ್ಲಿ ನಡೆಸಲಾಗುತ್ತಿದ್ದ ಬದಲಾವಣೆಗಳ ವಿರುದ್ಧ ಬಿಎಂಸಿ ಈ ಕಠಿಣ ಕ್ರಮ ಕೈಗೊಂಡಿದೆ.
ಮುಂಬೈನ ಜುಹೂನ ಕಪೋಲ್ ಸಹಕಾರಿ ವಸತಿ ಸೊಸೈಟಿಯಲ್ಲಿ ಅಜಯ್ ದೇವ್ಗನ್ ಅವರಿಗೆ ಸೇರಿದ 7,802 ಚದರ ಅಡಿಯ ಬಂಗಲೆ ಇದೆ. ಈ ಬಂಗಲೆಯೊಳಗೆ ಯಾವುದೇ ಅಧಿಕೃತ ಮುನ್ಸಿಪಲ್ ಅನುಮತಿ ಪಡೆಯದೆ ಆಂತರಿಕ ಬದಲಾವಣೆಗಳು, ವಿಭಜನಾ ಗೋಡೆಗಳ ನಿರ್ಮಾಣ, ಕಿಟಕಿಗಳ ಮಾರ್ಪಾಡು ಹಾಗೂ ಇತರೆ ರಚನಾತ್ಮಕ ಕೆಲಸಗಳನ್ನು ಕೈಗೊಳ್ಳಲಾಗುತ್ತಿತ್ತು. ಈ ಸಂಬಂಧ ಸೆಪ್ಟೆಂಬರ್ 10 ರಂದೇ ಬಿಎಂಸಿ ಕಾಯ್ದೆಯ ಸೆಕ್ಷನ್ 354ಎ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದ ಪಾಲಿಕೆ, ತಕ್ಷಣವೇ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಸೂಚಿಸಿತ್ತು. ಆದರೆ, ನೋಟಿಸ್ ಅನ್ನು ಲೆಕ್ಕಿಸದೆ ಕಾಮಗಾರಿ ಮುಂದುವರಿಸಿದ ಹಿನ್ನೆಲೆಯಲ್ಲಿ ಬಿಎಂಸಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅನಧಿಕೃತ ಕಟ್ಟಡದ ಭಾಗವನ್ನು ಕೆಡವಿದ್ದಾರೆ.
ವಿಮಲ್ ಜಾಹೀರಾತು ವಿವಾದದ ಸುಳಿಯಲ್ಲೂ ನಟ:
ಮತ್ತೊಂದೆಡೆ, ಅಜಯ್ ದೇವ್ಗನ್ ಅವರು ಇತ್ತೀಚೆಗೆ ವಿಮಲ್ ಇಲಾಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತು ನಿಷೇಧಿತ ಉತ್ಪನ್ನದ ಪರ್ಯಾಯ ರೂಪವಾಗಿರಬಹುದು ಎಂಬ ಶಂಕೆಯ ಮೇರೆಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಮುಖ್ಯಸ್ಥ ತುಕಾರಾಂ ಮುಂಡೆ ಅವರು ಅಜಯ್ ದೇವ್ಗನ್ ಸೇರಿದಂತೆ ಶಾರುಖ್ ಖಾನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಬಂಗಲೆ ಕೆಡವುವಿಕೆ ಹಾಗೂ ಜಾಹೀರಾತು ವಿವಾದ ಎರಡೂ ವಿಚಾರಗಳು ಸದ್ಯ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಇದನ್ನೂ ಓದಿ:ಭಾರತಕ್ಕೆ ಬಿಗ್ ರಿಲೀಫ್: ರಷ್ಯಾ ನಿರ್ಬಂಧ ತೆರವುಗೊಳಿಸಿದ ಟ್ರಂಪ್, ತಪ್ಪಿದ ಶೇ.100ರಷ್ಟು ಭಾರಿ ಸುಂಕ



















