ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಭಾರಿ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಇಪಿಎಫ್ಒ ಖಾತೆಯಿಂದ ಹಣ ಹಿಂಪಡೆಯುವ (PF Withdrawal) ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಮತ್ತು ವೇಗಗೊಳಿಸಲು ಯುಪಿಐ (UPI) ಆಧಾರಿತ ಹಣ ವರ್ಗಾವಣೆ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ಪ್ರಾರಂಭಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಸೇವೆಯನ್ನು ಅಧಿಕೃತವಾಗಿ ಸಾರ್ವಜನಿಕ ಬಳಕೆಗೆ ತರುವ ನಿರೀಕ್ಷೆಯಿದೆ.
ಸೇವೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
ಕ್ಷಿಪ್ರವಾಗಿ ವರ್ಗಾವಣೆ: ಪ್ರಸ್ತುತ ಇಪಿಎಫ್ಒ ಖಾತೆಯಿಂದ ಹಣ ಹಿಂಪಡೆಯಲು ಕ್ಲೇಮ್ ಸಲ್ಲಿಸಿದ ನಂತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲು 3 ರಿಂದ 7 ದಿನಗಳು ಬೇಕಾಗುತ್ತವೆ. ಆದರೆ ಯುಪಿಐ ವ್ಯವಸ್ಥೆ ಜಾರಿಗೆ ಬಂದ ನಂತರ ಹಣವು ತಕ್ಷಣವೇ ಚಂದಾದಾರರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಸರಳ ಪ್ರಕ್ರಿಯೆ: ಉದ್ಯೋಗಿಗಳು ತಮ್ಮ ಯುಎಎನ್ ಮತ್ತು ಆಧಾರ್ ಗೆ ಲಿಂಕ್ ಆಗಿರುವ ಯುಪಿಐ ಐಡಿ ಬಳಸಿ ನೇರವಾಗಿ ಸಾಲ ಅಥವಾ ಮುಂಗಡ ಹಣಕ್ಕಾಗಿ ಅರ್ಜಿ ಸಲ್ಲಿಸಬಹುದು.
ಮಧ್ಯವರ್ತಿಗಳಿಲ್ಲ: ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯನ್ನು ಆಟೋಮೇಷನ್ (Automated Process) ಮೂಲಕ ನಡೆಸಲಾಗುತ್ತಿದ್ದು, ಕ್ಲೇಮ್ ಗಳು ತಿರಸ್ಕೃತಗೊಳ್ಳುವ ಪ್ರಮಾಣ ಕಡಿಮೆಯಾಗಲಿದೆ.
ವರ್ಷಾಂತ್ಯಕ್ಕೆ ಸಾರ್ವಜನಿಕ ಬಳಕೆ
ಪ್ರಸ್ತುತ ಈ ತಂತ್ರಜ್ಞಾನದ ತಾಂತ್ರಿಕ ಸಾಮರ್ಥ್ಯ ಮತ್ತು ಭದ್ರತೆಯನ್ನು ಪರಿಶೀಲಿಸಲಾಗುತ್ತಿದೆ. ಸುರಕ್ಷತಾ ಮಾನದಂಡಗಳು ಪೂರ್ಣಗೊಂಡ ನಂತರ, ಇಪಿಎಫ್ಒ ತನ್ನ ‘ಉಮಂಗ್’ ಆ್ಯಪ್ ಅಥವಾ ಅಧಿಕೃತ ಪೋರ್ಟಲ್ ಮೂಲಕ ಈ ಸೌಲಭ್ಯವನ್ನು ಬಿಡುಗಡೆ ಮಾಡಲಿದೆ. ಈ ಹೊಸ ವ್ಯವಸ್ಥೆಯು ಕೋಟಿಗಟ್ಟಲೆ ಉದ್ಯೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಹಣ ಪಡೆಯಲು ನೆರವಾಗಲಿದೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ:ಕೇಂದ್ರದ HLL Lifecare ಸಂಸ್ಥೆಯಲ್ಲಿ 55 ಹುದ್ದೆಗಳ ನೇಮಕಾತಿ: 80 ಸಾವಿರ ರೂ. ಸ್ಯಾಲರಿ



















