ಬೆಂಗಳೂರು: ಕರ್ನಾಟಕದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಮತ್ತು ಹೆಚ್ಚುವರಿ ವಿವರಗಳನ್ನು ಸಲ್ಲಿಸುವ ಗಡುವನ್ನು ರಾಜ್ಯ ಸರ್ಕಾರವು ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇದುವರೆಗೆ ಯಾರು ಗೃಹಜ್ಯೋತಿ ಯೋಜನೆಗೆ ಅಗತ್ಯ ಮಾಹಿತಿ ನೀಡಿಲ್ಲವೋ, ಅವರೆಲ್ಲರೂ ಅಗತ್ಯ ಮಾಹಿತಿ, ದಾಖಲೆಗಳನ್ನು ಬಳಸುವ ಮೂಲಕ ಯೋಜನೆ ಅಡಿಯಲ್ಲಿ ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯಬಹುದು.
ಜುಲೈ 1ರಿಂದ ಆರಂಭವಾಗಿದ್ದ ಮರುಪರಿಶೀಲನೆಗೆ ಆರಂಭದಲ್ಲಿ ಒಂದು ತಿಂಗಳ ಸಮಯ ನೀಡಲಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರವು ಆಗಸ್ಟ್ 31ರವರೆಗೆ ಗಡುವು ನೀಡಿತ್ತು. ಆದರೆ, ಹೆಚ್ಚಿನ ಜನ ದಾಖಲೆ ಸಲ್ಲಿಸದ ಕಾರಣ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ಇಷ್ಟಾದರೂ ಮನೆಗೆ ಬೀಗ ಹಾಕಿದವರು, ವಲಸೆ ಹೋದವರು ಸೇರಿ ಹಲವರು ಯೋಜನೆಗೆ ದಾಖಲೆ ನೀಡದ ಕಾರಣ ಸರ್ಕಾರವು ಅಕ್ಟೋಬರ್ 31ರವರೆಗೆ ಅವಕಾಶ ನೀಡಿದೆ. ಯೋಜನೆಯಿಂದ ಯಾರೂ ವಂಚಿತರಾಗಬಾರದು ಎಂಬ ಕಾರಣದಿಂದಾಗಿ ಸರ್ಕಾರವು ಗಡುವು ವಿಸ್ತರಿಸಿದೆ.
ಯಾವೆಲ್ಲ ದಾಖಲೆ ಬೇಕು?
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಇತ್ತೀಚಿನ ವಿದ್ಯುತ್ ಬಿಲ್ ಮತ್ತು ಗ್ರಾಹಕರ ಐಡಿ (ಆರ್ ಆರ್ ನಂಬರ್)
- ಪಡಿತರ ಚೀಟಿ (ಅನ್ವಯಿಸಿದಲ್ಲಿ)
- ಪ್ಯಾನ್ ಕಾರ್ಡ್ (ಆದಾಯ ತೆರಿಗೆ ಪಾವತಿದಾರರಾಗಿದ್ದರೆ)
- ಬಾಡಿಗೆ ಒಪ್ಪಂದ ಪತ್ರ (ನೀವು ಬಾಡಿಗೆ ಮನೆಯಲ್ಲಿದ್ದರೆ)
- ಫಲಾನುಭವಿಯ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಗಮನಿಸಿ: ದಾಖಲೆ ಸಲ್ಲಿಕೆ ಪ್ರಕ್ರಿಯೆ ಉಚಿತವಾಗಿದ್ದು, ಯಾವುದೇ ಶುಲ್ಕ ನೀಡಬೇಕಾಗಿಲ್ಲ. ನಿಮ್ಮ ಮೂಲ ದಾಖಲೆಗಳನ್ನು ಯಾರ ಕೈಗೂ ನೀಡಬಾರದು, ಕೇವಲ ಸಿಬ್ಬಂದಿಗೆ ತೋರಿಸಿ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ ಗಳು ಮನೆಮನೆಗೆ ಭೇಟಿ ನೀಡಿ, ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಸಹಕರಿಸುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಇದನ್ನೂ ಓದಿ:ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 60 ಸಾವಿರ ರೂ. ಸ್ಕಾಲರ್ ಶಿಪ್ : ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ



















