ಬೆಂಗಳೂರು: ಉನ್ನತ ಶಿಕ್ಷಣವನ್ನು ಮುಂದುವರಿಸಲು ಹಣಕಾಸು ಸಮಸ್ಯೆ ಎದುರಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನೆರವಾಗುವ ನಿಟ್ಟಿನಲ್ಲಿ ‘ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ ಶಿಪ್ ಪ್ರೋಗ್ರಾಂ 2026-27’ (Aditya Birla Capital Scholarship) ಘೋಷಿಸಲಾಗಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಷನ್ ವತಿಯಿಂದ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ.
ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಶಾಲೆಗಳು, ಕಾಲೇಜುಗಳು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ 9ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ, ಪಾಲಿಟೆಕ್ನಿಕ್ ಡಿಪ್ಲೊಮಾ ಮತ್ತು ಪದವಿ ಹಂತದ ವಿದ್ಯಾರ್ಥಿನಿಯರು ಕೂಡ ಸದುಪಯೋಗ ಪಡೆದುಕೊಳ್ಳಬಹುದು. ವಿದ್ಯಾರ್ಥಿನಿಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ. 60ರಷ್ಟು ಅಂಕಗಳನ್ನು ಗಳಿಸಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಕೋರ್ಸಿಗೆ ತಕ್ಕಂತೆ ಆರ್ಥಿಕ ಸಹಾಯ ದೊರೆಯಲಿದೆ. 9 ರಿಂದ 12ನೇ ತರಗತಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 25 ಸಾವಿರ ರೂ., ಪದವಿ ವಿದ್ಯಾರ್ಥಿನಿಯರಿಗೆ 45 ಸಾವಿರ ರೂಪಾಯಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವವರಿಗೆ 60 ಸಾವಿರ ರೂಪಾಯಿವರೆಗೆ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬಯಸುವವರು https://www.buddy4study.com/page/aditya-birla-capital-scholarship ವೆಬ್ ಸೈಟ್ ಗೆ ಭೇಟಿ ನೀಡಬೇಕು. ನೋಂದಣಿ ಮಾಡಿಕೊಂಡು, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿರುವ ISRO ದಲ್ಲಿ ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ : 2.08 ಲಕ್ಷ ರೂ. ಸ್ಯಾಲರಿ!



















