ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಡಿಸೆಂಬರ್ 2026ರ ಯುಜಿಸಿ ನೆಟ್ (UGC NET) ಪರೀಕ್ಷೆಗೆ ಆನ್ ಲೈನ್ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಸಹಾಯಕ ಪ್ರಾಧ್ಯಾಪಕರ ಹುದ್ದೆ ಹಾಗೂ ಪಿಎಚ್.ಡಿ ಪ್ರವೇಶಕ್ಕೆ ಅರ್ಹತೆ ಪಡೆಯಲು ಬಯಸುವ ಉನ್ನತ ಶಿಕ್ಷಣದ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ಅಧಿಕೃತ ಪ್ರಕಟಣೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 28ರ ರಾತ್ರಿ 11:50ರವರೆಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ಗಡುವಿನೊಳಗೆ ಅರ್ಜಿ ಸಲ್ಲಿಸಲು ವಿಫಲರಾಗುವವರಿಗೆ ಅನುಕೂಲವಾಗುವಂತೆ ಅಕ್ಟೋಬರ್ 29ರಿಂದ 31ರವರೆಗೆ ವಿಳಂಬ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ಒಂದು ವೇಳೆ ಭರ್ತಿ ಮಾಡಿದ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ನವೆಂಬರ್ 2 ರಿಂದ ನವೆಂಬರ್ 4ರವರೆಗೆ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ಅರ್ಜಿ ಶುಲ್ಕ ಎಷ್ಟು?
ವಿವಿಧ ವರ್ಗದ ಅಭ್ಯರ್ಥಿಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಸಾಮಾನ್ಯ ವರ್ಗದವರಿಗೆ 1,150 ರೂ., ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ 600 ರೂ. ಹಾಗೂ ಎಸ್ಸಿ/ಎಸ್ಟಿ/ದಿವ್ಯಾಂಗ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 325 ರೂ. ಶುಲ್ಕವಿರುತ್ತದೆ. ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ (ಸಿಬಿಟಿ) ಡಿಸೆಂಬರ್ 14ರಿಂದ ಡಿಸೆಂಬರ್ 19 ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎನ್ ಪಿಸಿಐನ ಅಧಿಕೃತ ವೆಬ್ ಸೈಟ್ ಆಗಿರುವ https://ugcnet.nta.nic.in/ ಗೆ ಭೇಟಿ ಮೂಲಕ ಅರ್ಜಿ ಸಲ್ಲಿಸಬೇಕು. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು, ಸಿಲಬಸ್ ಹಾಗೂ ಅಧಿಸೂಚನೆಗಾಗಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಲು ಸೂಚಿಸಲಾಗಿದೆ. ಪರೀಕ್ಷೆಗೆ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಇತರ ಯಾವುದೇ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಎನ್ ಟಿಎ ವೆಬ್ ಸೈಟ್ ನಲ್ಲಿ ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ಓದಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವ ಅಭ್ಯರ್ಥಿಗಳು ಅನರ್ಹರಾಗುವ ಸಾಧ್ಯತೆ ಇದೆ ಎಂಬುದನ್ನು ಮರೆಯಬಾರದು.
ಇದನ್ನೂ ಓದಿ:ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ : ಈ ತಪ್ಪು ಮಾಡಿದರೆ ಬೀಳಲಿದೆ 10 ಸಾವಿರ ರೂ. ದಂಡ!



















