ಬೆಂಗಳೂರು: ಪಾನ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಅತ್ಯಂತ ಪ್ರಮುಖವಾದ ಹಣಕಾಸಿನ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದು, ದೊಡ್ಡ ಮೊತ್ತದ ಹಣಕಾಸು ವಹಿವಾಟು ನಡೆಸುವುದು, ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ, ಆಸ್ತಿ ಖರೀದಿ ಮತ್ತು ಸಾಲ ಪಡೆಯುವಂತಹ ಪ್ರತಿಯೊಂದು ಪ್ರಮುಖ ಕೆಲಸಕ್ಕೂ ಪ್ಯಾನ್ ಕಾರ್ಡ್ (PAN Card) ಕಡ್ಡಾಯವಾಗಿದೆ. ಆದರೆ, ಇದನ್ನು ಬಳಸುವಾಗ ಮತ್ತು ನಿರ್ವಹಿಸುವಾಗ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು 10 ಸಾವಿರ ರೂಪಾಯಿವರೆಗೆ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ, ಜನರು ಪ್ಯಾನ್ ಕಾರ್ಡಿಗೆ ಸಂಬಂಧಿಸಿದಂತೆ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳುವುದು ಸುರಕ್ಷಿತ.
ಆದಾಯ ತೆರಿಗೆ ಕಾಯಿದೆಯ ನಿಯಮಗಳ ಪ್ರಕಾರ, ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಗಳನ್ನು ಹೊಂದಿರುವುದು ಕಾನೂನುಬಾಹಿರವಾಗಿದೆ. ಹಲವರು ತಮ್ಮ ಹಳೆಯ ಕಾರ್ಡ್ ಕಳೆದುಹೋದಾಗ ಅಥವಾ ವಿಳಾಸ ಬದಲಾದಾಗ ಹೊಸದಾಗಿ ಮತ್ತೊಂದು ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಇದು ಗಂಭೀರ ತಪ್ಪಾಗಿದ್ದು, ಹೀಗೆ ಎರಡು ಪ್ಯಾನ್ ಕಾರ್ಡ್ ಗಳನ್ನು ಇಟ್ಟುಕೊಂಡರೆ ಆದಾಯ ತೆರಿಗೆ ಇಲಾಖೆಯು 10 ಸಾವಿರ ರೂ.ವರೆಗೆ ದಂಡ ವಿಧಿಸಬಹುದು. ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇರುತ್ತದೆ.
ಒಂದು ವೇಳೆ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ಗಳಿದ್ದರೆ, ಕೂಡಲೇ ಹೆಚ್ಚುವರಿ ಅಥವಾ ಹಳೆಯ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ ಹಿಂತಿರುಗಿಸಬೇಕು. ಪ್ಯಾನ್ ಕಾರ್ಡ್ 2.0 ವ್ಯವಸ್ಥೆ ಜಾರಿಗೊಳಿಸಿದ ಕಾರಣ ಯಾರಾದರೂ ಎರಡು ಪ್ಯಾನ್ ಕಾರ್ಡ್ ಹೊಂದಿದ್ದಾರೆಯೇ ಎಂಬುದನ್ನು ಗುರುತಿಸುವುದು ಸುಲಭವಾಗಿದೆ. ಹಾಗಾಗಿ, ಜನರು ಎಚ್ಚರಿಕೆಯಿಂದ ಇರಬೇಕು.
ಹಾಗೆಯೇ, ಪ್ಯಾನ್ ಕಾರ್ಡ್ ನಲ್ಲಿ ಹೆಸರು, ಹುಟ್ಟಿದ ದಿನಾಂಕ ಅಥವಾ ಸಹಿ ತಪ್ಪುಗಳಿದ್ದರೆ ಕೂಡಲೇ ಆನ್ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳುವುದು ಉತ್ತಮ. ಯಾವುದೇ ದಂಡ ಹಾಗೂ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಸರ್ಕಾರದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಕಾರ್ಡ್ ದಾರರ ಜವಾಬ್ದಾರಿಯಾಗಿದೆ.
ಇದನ್ನೂ ಓದಿ:ತುಕಾರಾಂ ಮುಂಡೆ ನೇತೃತ್ವದ ತನಿಖಾ ಸಮಿತಿ ರಚನೆ : 10 ದಿನಗಳ ಎಂಪಿಎಸ್‍ಸಿ ಅಭ್ಯರ್ಥಿಗಳ ಹೋರಾಟ ಅಂತ್ಯ



















