ಪುಣೆ: ಮಹಾರಾಷ್ಟ್ರ ಲೋಕಸೇವಾ ಆಯೋಗದಲ್ಲಿ (MPSC) ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಅಕ್ರಮಗಳ ತನಿಖೆಗೆ ಹಿರಿಯ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ಕಾರ್ಯದರ್ಶಿಯಾಗಿರುವ ತನಿಖಾ ಸಮಿತಿಯನ್ನು ಸರ್ಕಾರ ರಚಿಸಿದ ಬೆನ್ನಲ್ಲೇ, ಕಳೆದ 10 ದಿನಗಳಿಂದ ಹೋರಾಟ ನಡೆಸುತ್ತಿದ್ದ ಅಭ್ಯರ್ಥಿಗಳು ಭಾನುವಾರ ತಡರಾತ್ರಿಯೇ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಈ ಎಲ್ಲ ಘಟನೆಗಳ ಬೆನ್ನಲ್ಲೇ ಎಂಪಿಎಸ್‍ಸಿ ಅಧ್ಯಕ್ಷರಾದ ವಿವೇಕ್ ಭೀಮನ್ವಾರ್ ಅವರು ತನಿಖೆ ಪೂರ್ಣಗೊಳ್ಳುವವರೆಗೆ ರಜೆಯ ಮೇಲೆ ತೆರಳುವುದಾಗಿ ಘೋಷಿಸಿದ್ದಾರೆ.ಪುಣೆಯ ಎಸ್‌ಎಮ್ ಜೋಶಿ ಸೇತುವೆಯ ಬಳಿ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದ ಅಭ್ಯರ್ಥಿಗಳನ್ನು ಸಚಿವ ಶಿವೇಂದ್ರ ರಾಜೇ ಭೋಸಲೆ ನೇತೃತ್ವದ ರಾಜ್ಯ ಸರ್ಕಾರದ ನಿಯೋಗವು ಭೇಟಿಯಾಗಿ ಸಮಾಲೋಚನೆ ನಡೆಸಿತು. ಆಯೋಗದ ಅಕ್ರಮಗಳ ತನಿಖೆಗೆ ಸಮಿತಿ ರಚನೆ ಸೇರಿದಂತೆ ಅಭ್ಯರ್ಥಿಗಳ ಬಹುತೇಕ ಬೇಡಿಕೆಗಳನ್ನು ಸರ್ಕಾರ ಪುರಸ್ಕರಿಸಿದೆ.
ಭೀಮನ್ವಾರ್ ನಿರ್ಗಮನಕ್ಕೆ ಪಟ್ಟು: ತನಿಖಾ ಸಮಿತಿ ಘೋಷಣೆ
ಪ್ರತಿಭಟನೆಯಲ್ಲಿ ಅಭ್ಯರ್ಥಿಗಳ ಪರವಾಗಿ ಭಾಗವಹಿಸಿದ್ದ ಎನ್‌ಸಿಪಿ (ಎಸ್‍ಪಿ) ಶಾಸಕ ರೋಹಿತ್ ಪವಾರ್ ಅವರು, ಅಧ್ಯಕ್ಷರ ರಾಜೀನಾಮೆ ಪ್ರಕ್ರಿಯೆ ತಡವಾಗುವುದರಿಂದ ತನಿಖೆ ಮುಗಿಯುವವರೆಗೆ ಭೀಮನ್ವಾರ್ ಅವರನ್ನು ಹುದ್ದೆಯಿಂದ ದೂರವಿಡಲು ಸಲಹೆ ನೀಡಿದರು. ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಸಚಿವ ಭೋಸಲೆ ದೂರವಾಣಿ ಮೂಲಕ ಚರ್ಚಿಸಿ, ವಿದ್ಯಾರ್ಥಿಗಳ ಬೇಡಿಕೆಗೆ ಸರ್ಕಾರ ಸಮ್ಮತಿಸಿದೆ ಎಂದು ತಿಳಿಸಿದರು. ಇದರೊಂದಿಗೆ ನಿರಂತರವಾಗಿ ನಡೆಯುತ್ತಿದ್ದ ಗೊಂದಲಕ್ಕೆ ತೆರೆಬಿದ್ದಿದ್ದು, ಅಭ್ಯರ್ಥಿಗಳ ಪ್ರತಿನಿಧಿ ವಿವೇಕಾನಂದ ಪಾಟೀಲ್ ಅವರು ಪ್ರತಿಭಟನೆ ಹಿಂಪಡೆಯುತ್ತಿರುವುದಾಗಿ ಪ್ರಕಟಿಸಿದರು.ಸರ್ಕಾರ ರಚಿಸಿರುವ ಈ ಉನ್ನತ ಮಟ್ಟದ ತನಿಖಾ ಸಮಿತಿಯಲ್ಲಿ ಮಾಜಿ ನ್ಯಾಯಮೂರ್ತಿ ದಿಲೀಪ್ ಭೋಸಲೆ ಅಧ್ಯಕ್ಷರಾಗಿದ್ದು, ಆಹಾರ ಮತ್ತು ಔಷಧ ಆಡಳಿತ (FDA) ಕಮಿಷನರ್ ತುಕಾರಾಂ ಮುಂಡೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಐಪಿಎಸ್ ಅಧಿಕಾರಿ ಲಕ್ಷ್ಮಿ ಗೌತಮ್, ಮಾಜಿ ಐಎಎಸ್ ಅಧಿಕಾರಿ ಗಣೇಶ್ ಪಾಟೀಲ್ ಮತ್ತು ನಿವೃತ್ತ ನ್ಯಾಯಮೂರ್ತಿ ಪಿ.ಡಿ. ನಾಯಕ್ ಸಮಿತಿಯ ಸದಸ್ಯರಾಗಿದ್ದಾರೆ.
ವಿದ್ಯಾರ್ಥಿಗಳ ಇತರ ಬೇಡಿಕೆಗಳ ಈಡೇರಿಕೆಗೆ ಭರವಸೆ
ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು, ಮುಂದಿನ ಮೂರು ವರ್ಷಗಳಲ್ಲಿ 70,000 ಹುದ್ದೆಗಳ ಭರ್ತಿ, ಜನವರಿಯಲ್ಲಿ ನಡೆಯಲಿರುವ ಗ್ರೂಪ್-ಸಿ ಪರೀಕ್ಷೆಯ ಹುದ್ದೆಗಳ ಸಂಖ್ಯೆ ಹೆಚ್ಚಳ ಹಾಗೂ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನೇಮಕಾತಿಗೂ ಮುನ್ನ ಅವರ ಹಿನ್ನೆಲೆ ಪರಿಶೀಲನೆ ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಸಮಿತಿಯಲ್ಲಿ ತುಕಾರಾಂ ಮುಂಡೆ ಅವರ ಸೇರ್ಪಡೆಯನ್ನು ಶಾಸಕ ರೋಹಿತ್ ಪವಾರ್ ಸ್ವಾಗತಿಸಿದ್ದು, ಸಮಿತಿಗೆ ಸ್ವತಂತ್ರವಾಗಿ ಕೆಲಸ ಮಾಡುವ ಹಕ್ಕು ಸಿಗಲಿ ಎಂದು ಆಶಿಸಿದ್ದಾರೆ.ಇತ್ತ ಎಂಪಿಎಸ್‍ಸಿ ಅಧ್ಯಕ್ಷ ವಿವೇಕ್ ಭೀಮನ್ವಾರ್ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿ, “ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ನನ್ನ ಜೀವನದಲ್ಲಿ ನಾನು ಸದಾ ನೈತಿಕತೆಗೆ ಆದ್ಯತೆ ನೀಡಿದ್ದೇನೆ. ಆದ್ದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಹುದ್ದೆಯಲ್ಲಿ ಮುಂದುವರಿಯುವ ಬದಲು ರಜೆಯ ಮೇಲೆ ತೆರಳಲು ನಿರ್ಧರಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:CEC ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಒಕ್ಕೂಟದ ಸಮರ ತೀವ್ರ : ಬೀದಿ ಹೋರಾಟದ ಜೊತೆಗೆ ಕಾನೂನು ಸಮರಕ್ಕೂ ಚಿಂತನೆ!



















