ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು(ಶನಿವಾರ) ಸಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಬಿಸಿ ಕಾವೇರುತ್ತಿರುವಂತೆಯೇ, ವಿವಿಧೆಡೆ ಹೈಡ್ರಾಮಾ ಆರಂಭವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂಬೈನಿಂದ ದೆಹಲಿಗೆ ಆಗಮಿಸುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಇತರ ನಾಯಕರನ್ನು ದೆಹಲಿ ಪೊಲೀಸರು ವಿಮಾನದೊಳಗೆಯೇ ಪ್ರವೇಶಿಸಿ ವಶಕ್ಕೆ ಪಡೆದಿದ್ದಾರೆ.
ವಿಮಾನದೊಳಗೆಯೇ ನಡೆದ ವಾಗ್ವಾದ ಮತ್ತು ಬಂಧನ
ಶನಿವಾರ ಬೆಳಗ್ಗೆ ಮುಂಬೈನಿಂದ ದೆಹಲಿಗೆ ಹೊರಟಿದ್ದ ವಿಮಾನವು ಐಜಿಐ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ, ದಿಢೀರ್ ಎಂದು ಒಳನುಗ್ಗಿದ ದೆಹಲಿ ಪೊಲೀಸರ ತಂಡವು ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ವಶಕ್ಕೆ ತೆಗೆದುಕೊಂಡಿತು. ಈ ವೇಳೆ ಪೊಲೀಸರು ಕೆಳಗೆ ಇಳಿಯುವವರೆಗೆ ಕಾಯಬಹುದಿತ್ತು ಎಂದು ಸಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. “ನೀವು ನಾವು ಹೊರಬರುವವರೆಗೆ ಕಾಯಬಹುದಿತ್ತು, ನಮ್ಮನ್ನು ಬಂಧಿಸಿ, ನಾವು ಹೆದರುವುದಿಲ್ಲ” ಎಂದು ದೀಪ್ಕೆ ಪೊಲೀಸರಿಗೆ ಸವಾಲು ಹಾಕುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವಿಡಿಯೋ ಮೂಲಕ ಹೊರಬಂದಿವೆ. ಆದಾಗ್ಯೂ, ಇದು ಬಂಧನವಲ್ಲ, ಕೇವಲ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು ಎಂದು ತಿಳಿದುಬಂದಿದೆ. ನಂತರ ನಾಯಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಪ್ರತಿಭಟನೆಗೆ ಬ್ರೇಕ್ ಹಾಕಲು ವ್ಯಾಪಕ ಬಂದೋಬಸ್ತ್
ದೆಹಲಿಯ ಜಂತರ್ ಮಂತರ್‌ನಲ್ಲಿ ನಿಗದಿಯಾಗಿದ್ದ ಈ ಪ್ರತಿಭಟನೆಗೆ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ದೆಹಲಿ ಪೊಲೀಸರು ಶುಕ್ರವಾರವೇ ಅನುಮತಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಆಡಳಿತ ಯಂತ್ರವು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯೂಟ್ಯೂಬರ್ ಧ್ರುವ ರಾಠೀ ಹಾಗೂ ಸಿಜೆಪಿ ಕಾನೂನು ಕೋಶದ ಮುಖ್ಯಸ್ಥೆ ರತ್ನ ಸಿಂಗ್ ಅವರನ್ನು ಮುಂಜಾನೆಯೇ ಅವರ ನಿವಾಸಗಳಲ್ಲಿ ಗೃಹಬಂಧನದಲ್ಲಿರಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ರಾತ್ರೋರಾತ್ರಿ 400ಕ್ಕೂ ಅಧಿಕ ಶಂಕಿತ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.
ಪ್ರತಿಭಟನಾಕಾರರ ಚಲನವಲನಗಳನ್ನು ತಡೆಯುವ ಸಲುವಾಗಿ ದೆಹಲಿಯಲ್ಲಿ ಬಿಗಿ ಭದ್ರತಾ ನಿರ್ಬಂಧಗಳನ್ನು ವಿಧಿಸಲಾಗಿದೆ. ಒಟ್ಟು 45 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ದೆಹಲಿಗೆ ಬರುತ್ತಿದ್ದ 250ಕ್ಕೂ ಅಧಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು 20,000ಕ್ಕೂ ಹೆಚ್ಚು ದೆಹಲಿ ಪೊಲೀಸ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದೆ. ನಾಯಕರ ಈ ‘ಅಧಿಕಾರಶಾಹಿ ಬಂಧನ’ವನ್ನು ಸಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೂಡಲೇ ನಾಯಕರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ.
ಇದನ್ನೂ ಓದಿ :10 ಲಕ್ಷ ರೂ. ಎಫ್.ಡಿ ಇರಿಸಿದರೆ ನಿಮಗೆ ತಿಂಗಳಿಗೆ ಎಷ್ಟು ಆದಾಯ ಬರುತ್ತದೆ?


















