ನವದೆಹಲಿ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಇತರ ಇಬ್ಬರು ಚುನಾವಣೆ ಆಯುಕ್ತರ ಆಕ್ಷೇಪಣೆಗಳನ್ನು ಮೀರಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ, ಮುಖ್ಯ ಚುನಾವಣೆ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸೂಕ್ತ ಕ್ರಿಮಿನಲ್ ಕ್ರಮ ಜರುಗಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ವಕೀಲ ಚಾಂದ್ ಖುರೇಷಿ ಅವರ ಮೂಲಕ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಇಬ್ಬರು ಆಯುಕ್ತರ ಲಿಖಿತ ಆಕ್ಷೇಪಣೆಗಳ ಹೊರತಾಗಿಯೂ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂಬ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿಯ ಬೆನ್ನಲ್ಲೇ ಈ ಕಾನೂನು ಸಮರ ಆರಂಭವಾಗಿದೆ.
ಬಹುಮತದ ಅಭಿಪ್ರಾಯ ಕಡೆಗಣಿಸಿದ ಆರೋಪ
ಭಾರತೀಯ ಚುನಾವಣಾ ಆಯೋಗದ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರ ಸಮ್ಮತಿ ಪಡೆಯದೇ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಸಾಫ್ಟ್ವೇರ್ನಲ್ಲಿ ಬದಲಾವಣೆಗಳು ಹಾಗೂ ಶಾಸನಬದ್ಧ ಫಾರ್ಮ್ 6ರ ಕಾರ್ಯವಿಧಾನ ಮತ್ತು ನಿಬಂಧನೆಗಳಿಗೆ ತಿದ್ದುಪಡಿ ತಂದಿರುವುದು ಈ ವಿವಾದಕ್ಕೆ ಮುಖ್ಯ ಕಾರಣವಾಗಿದೆ.
ಮುಖ್ಯ ಚುನಾವಣೆ ಆಯುಕ್ತರು ಮತ್ತು ಇತರ ಚುನಾವಣೆ ಆಯುಕ್ತರ ಕಾಯ್ದೆ 2023ರ ಸೆಕ್ಷನ್ 18ರ ಅಡಿಯಲ್ಲಿ ಆಯೋಗದ ಬಹುಮತದ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೈಗೊಳ್ಳಲಾದ ಇಂತಹ ಎಲ್ಲಾ ಮಾರ್ಗದರ್ಶಿ ಸೂತ್ರಗಳು, ಆದೇಶಗಳು ಮತ್ತು ಸಾಫ್ಟ್ವೇರ್ ಬದಲಾವಣೆಗಳನ್ನು ಸಂವಿಧಾನಬಾಹಿರ ಹಾಗೂ ರದ್ದುಗೊಳಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹ
ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರಷ್ಟೇ ಅಲ್ಲದೆ, ತಮ್ಮ ಅಧಿಕೃತ ಕರ್ತವ್ಯಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹಿರಿಯ ಉಪ ಚುನಾವಣೆ ಆಯುಕ್ತ ಮನೀಶ್ ಗರ್ಗ್, ಮಾಹಿತಿ ತಂತ್ರಜ್ಞಾನ ವಿಭಾಗದ ಡೈರೆಕ್ಟರ್ ಜನರಲ್ ಸೀಮಾ ಖನ್ನಾ ಮತ್ತು ಇತರ ಸಂಬಂಧಿತ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಬಾಂಬೆ ಹೈಕೋರ್ಟ್ನಲ್ಲೂ ಪ್ರಶ್ನೆ, ಎಫ್ಐಆರ್ಗೆ ಆಗ್ರಹ
ಈ ವಿವಾದದ ಕಾವು ಕೇವಲ ಸುಪ್ರೀಂಕೋರ್ಟ್ಗೆ ಸೀಮಿತವಾಗಿಲ್ಲ. ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಿಇಸಿ ನೀಡಿದ್ದ 14 ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ನಲ್ಲೂ ಎರಡು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಅರ್ಹರ ಹೆಸರುಗಳನ್ನು ಮರು ಸೇರ್ಪಡೆಗೊಳಿಸಬೇಕು ಮತ್ತು ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ನಲ್ಲಿ ಮನವಿ ಮಾಡಲಾಗಿದೆ. ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಈ ಸಂಬಂಧ ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಿಎಸ್ಕೆ ಹೊಸ ಕೋಚ್ ಝಹೀರ್ ಖಾನ್ ಪ್ಲ್ಯಾನ್ ಏನು? ‘ಬ್ರ್ಯಾಂಡ್ ರಕ್ಷಿಸುವುದೇ ಮೊದಲ ಗುರಿ’


















