ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪವಿತ್ರಾ ಗೌಡ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಇಂದು ಆದೇಶ ಹೊರಬೀಳಲಿದೆ. ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಿತ್ತು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು.
ಬೆಳಗ್ಗೆ 11 ಗಂಟೆಯ ನಂತರ ಜಾಮೀನು ಅರ್ಜಿಯ ಕುರಿತು ನ್ಯಾಯಾಲಯ ಆದೇಶ ಪ್ರಕಟಿಸುವ ನಿರೀಕ್ಷೆಯಿದೆ. ಪವಿತ್ರಾ ಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ಇದು ನಾಲ್ಕನೇ ಬಾರಿ ಜಾಮೀನು ಕೋರುತ್ತಿರುವ ಪ್ರಯತ್ನವಾಗಿದೆ.
ಈ ನಡುವೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿ, ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಸಂಬಂಧ ಸತ್ರ ನ್ಯಾಯಾಲಯ ಹೊಸದಾಗಿ ಆದೇಶ ಹೊರಡಿಸಿದೆ. ಈ ಹಿಂದೆ ಹೈಕೋರ್ಟ್ ಸತ್ರ ನ್ಯಾಯಾಲಯದ ಆದೇಶವನ್ನು ಪ್ರಕ್ರಿಯಾತ್ಮಕ ಕಾರಣಕ್ಕಾಗಿ ರದ್ದುಪಡಿಸಿ, ಹೊಸದಾಗಿ ಆದೇಶ ನೀಡುವಂತೆ ಸೂಚಿಸಿತ್ತು.
ಪ್ರದೋಷ್ ಮಾಫಿ ಸಾಕ್ಷಿಯಾಗಿರುವ ಬೆಳವಣಿಗೆಯ ನಡುವೆಯೇ ಪವಿತ್ರಾ ಗೌಡ ಜಾಮೀನು ಅರ್ಜಿ ಕುರಿತು ಇಂದು ಹೊರಬೀಳಲಿರುವ ಆದೇಶ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಪವಿತ್ರಾ ಗೌಡ ಪರ ವಕೀಲರು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದು, ಪ್ರಾಸಿಕ್ಯೂಷನ್ ಜಾಮೀನಿಗೆ ಆಕ್ಷೇಪಣೆ ವ್ಯಕ್ತಪಡಿಸಿದೆ. ಹೀಗಾಗಿ ನ್ಯಾಯಾಲಯದ ಆದೇಶದತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.
ಇದನ್ನೂ ಓದಿ : ಗಿಲ್‌ಗೆ ಕೊಹ್ಲಿ-ರೋಹಿತ್ ಮಾರ್ಗದರ್ಶನ : ನಾಯಕತ್ವದ ಹೊಣೆ ನಿಭಾಯಿಸಲು ಇಬ್ಬರು ದಿಗ್ಗಜರ ಬೆಂಬಲ



















