ಬೆಂಗಳೂರು : ಮಾಫಿ ಸಾಕ್ಷಿಯಾಗಲು ಪ್ರದೂಷ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಶ್ನಿಸಿ ನಟ ದರ್ಶನ್ ಪರವಾಗಿ ವಿಜಯಲಕ್ಷ್ಮಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಆದೇಶ ರದ್ದುಪಡಿಸುವಂತೆ ಕೋರಿ ವಿಜಯಲಕ್ಷ್ಮಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ.
ಸ್ವಾರ್ಥಕ್ಕಾಗಿ ಹಾಗೂ ಬೇರೆಯವರ ಒತ್ತಡಕ್ಕೆ ಮಣಿದು ಪ್ರದೂಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ದರ್ಶನ್ ಪರ ವಾದಿಸಲಾಗಿದೆ. ದರ್ಶನ್ ವಿರೋಧಿಗಳ ಪ್ರಭಾವದಿಂದಲೇ ಪ್ರದೂಷ್ ಈ ಅರ್ಜಿ ಸಲ್ಲಿಸಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿದೆ. ಎರಡು ವರ್ಷಗಳಿಂದ ಅರ್ಜಿ ಸಲ್ಲಿಸದೆ, ಇದೀಗ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದರ ಬಗ್ಗೆಯೂ ಪ್ರಶ್ನೆಯನ್ನು ವಿಜಯಲಕ್ಷ್ಮಿ ಎತ್ತಿದ್ದಾರೆ.
ಇನ್ನು ಪ್ರದೂಷ್ ಜೈಲಿನಲ್ಲಿದ್ದ ವೇಳೆ ಅನಧಿಕೃತವಾಗಿ ಮೊಬೈಲ್ ಬಳಸಿಕೊಂಡು ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಈ ಸಂಬಂಧ ಪ್ರದೂಷ್ ವಿರುದ್ಧ ಎನ್ಸಿಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಾಫಿ ಸಾಕ್ಷಿಯಾಗಲು ಇದೇ ಮೊಬೈಲ್ ಬಳಕೆಯಾಗಿರಬಹುದು ಎಂಬ ಶಂಕೆಯನ್ನೂ ದರ್ಶನ್ ಪರ ಅರ್ಜಿಯಲ್ಲಿ ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ. ಹೀಗಾಗಿ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಆದೇಶ ರದ್ದುಪಡಿಸುವಂತೆ ವಿಜಯಲಕ್ಷ್ಮಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಹೈಕೋರ್ಟ್ನ ಮುಂದಿನ ಕ್ರಮದತ್ತ ಗಮನ ನೆಟ್ಟಿದೆ.
ಇದನ್ನೂ ಓದಿ : ಇಂದು ವಿಧಾನಮಂಡಲ ಅಧಿವೇಶನದ ಕೊನೆಯ ದಿನ.. ಏನೆಲ್ಲಾ ಚರ್ಚೆಯಾಗಲಿದೆ?


















