ತುಮಕೂರು : ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ನಡೆದ ಗಲಾಟೆ ಹಿನ್ನೆಲೆ ನ್ಯಾಯ ರಕ್ಷಣೆ ಕೋರಿ ಪೊಲೀಸ್ ಠಾಣೆಗಳಿಗೆ ಅಲೆದಾಡಿದ ಅಪ್ಪ-ಮಗ, ದೂರು ಸ್ವೀಕರಿಸದೆ ಸಾಗಹಾಕಿದ್ದಾರೆಂಬ ಆರೋಪದಿಂದ ನೊಂದು ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.
ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಹುಚ್ಚಪ್ಪ (68) ಹಾಗೂ ಅವರ ಪುತ್ರ ನಾಗರಾಜು (34) ಆತ್ಮಹತ್ಯೆಗೆ ಯತ್ನಿಸಿದವರು. ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಗಲಾಟೆ ನಡೆದಿದ್ದು, ಈ ಸಂಬಂಧ ನ್ಯಾಯ ರಕ್ಷಣೆ ಕೋರಿ ತಂದೆ-ಮಗ ನೊಣವಿನಕೆರೆ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ದೂರು ಸ್ವೀಕರಿಸದೆ ಪೊಲೀಸರು ಅಲೆದಾಡಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ತಂದೆ-ಮಗ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ್ದರು. ಅಲ್ಲಿಯೂ ದೂರು ಸ್ವೀಕರಿಸದೆ ಸಾಗಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಠಾಣೆಯಿಂದ ಠಾಣೆಗೆ ಅಲೆದಾಡಿದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನೊಂದ ತಂದೆ-ಮಗ, ಕೊನೆಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿ ಅಸ್ವಸ್ಥಗೊಂಡ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : “ರಾಜ್ಯದ ಮೂಲೆ ಮೂಲೆಯಲ್ಲಿ ತಿರಂಗಾ ಯಾತ್ರೆ ಮಾಡ್ತೀವಿ” ; ಪ್ರಿಯಾಂಕ್ ಖರ್ಗೆಗೆ ಸೂಲಿಬೆಲೆ ಸವಾಲ್!



















