ನವದೆಹಲಿ : ದೇಶಾದ್ಯಂತ ರಿಯಲ್ ಎಸ್ಟೇಟ್ ಕಂಪನಿಗಳು ಮನೆ ಖರೀದಿದಾರರಿಗೆ ನೀಡುವ ಪ್ರಾಸ್ಪೆಕ್ಟಸ್ ಮತ್ತು ಬ್ರೋಷರ್(ಕರಪತ್ರ)ಗಳಲ್ಲಿ ಕೊಡುವ ಆಕರ್ಷಕ ಭರವಸೆಗಳು ಕೇವಲ ಜಾಹೀರಾತು ತಂತ್ರಗಳಲ್ಲ, ಅವು ಗ್ರಾಹಕರಿಗೆ ನೀಡುವ ಅಧಿಕೃತ ವಾಗ್ದಾನಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಫ್ಲ್ಯಾಟ್ ಮಾರಾಟ ಮಾಡುವಾಗ ತೋರಿಸುವ ನಕ್ಷೆ ಮತ್ತು ಸೌಲಭ್ಯಗಳನ್ನೇ ನಿರ್ಮಾಣ ಮುಗಿದ ಮೇಲೆಯೂ ಹಸ್ತಾಂತರಿಸಬೇಕು, ಅದರಲ್ಲಿ ಯಾವುದೇ ರೀತಿಯ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಲ್ಡರ್‌ಗಳಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಪೀಠ ಎಚ್ಚರಿಸಿದೆ.
ಗುರುಗ್ರಾಮದ ಸೆಕ್ಟರ್ 82ಎ ನಲ್ಲಿರುವ ಡಿಎಲ್‌ಎಫ್ (DLF) ಹೋಮ್ ಡೆವಲಪರ್ಸ್ ಸಂಸ್ಥೆಯ ‘ದಿ ಪ್ರೈಮಸ್’ ವಸತಿ ಸಮುಚ್ಚಯ ಯೋಜನೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ. ಯೋಜನೆಯ ಮೂಲ ನಕ್ಷೆಯಲ್ಲಿ ತೋರಿಸಲಾಗಿದ್ದ 24 ಮೀಟರ್ ಅಗಲದ ರಸ್ತೆಯನ್ನು ನಂತರದಲ್ಲಿ ಸಂಪೂರ್ಣವಾಗಿ ಬದಲಾಯಿಸಿರುವುದು ಕಂಡುಬಂದಿದೆ. “ಇದು ಸಣ್ಣ ದೋಷವಲ್ಲ, ದೊಡ್ಡ ಮಟ್ಟದ ಉಲ್ಲಂಘನೆ” ಎಂದು ಅಭಿಪ್ರಾಯಪಟ್ಟ ಪೀಠವು, ಬ್ರೋಷರ್‌ನಲ್ಲಿ ನೀಡಿದ ಭರವಸೆಯಂತೆ ಯೋಜನೆಯನ್ನು ತಿದ್ದುಪಡಿ ಮಾಡದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದೆ.
ಸಿಬಿಐ ತನಿಖೆಯಿಂದ ಬಯಲಾಯ್ತು ಸತ್ಯಾಂಶ
ಈ ಯೋಜನೆಯ ಅಕ್ರಮಗಳ ಕುರಿತು ಮಧ್ಯಂತರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಈ ಹಿಂದೆ ಕೇಂದ್ರೀಯ ತನಿಖಾ ದಳಕ್ಕೆ (CBI) ಸೂಚಿಸಿತ್ತು. ಸಿಬಿಐ ಸಲ್ಲಿಸಿದ ಪ್ರಾಥಮಿಕ ವರದಿಯ ಪ್ರಕಾರ, ಬ್ರೋಷರ್‌ನಲ್ಲಿ ಪ್ರದರ್ಶಿಸಲಾಗಿದ್ದ 24 ಮೀಟರ್ ಅಗಲದ ರಸ್ತೆಯು ವಾಸ್ತವದಲ್ಲಿ ಸೂಕ್ತ ರೀತಿಯಲ್ಲಿ ನಿರ್ಮಾಣಗೊಂಡಿಲ್ಲ. ಯೋಜಿಸಲಾಗಿದ್ದ ಸುಮಾರು 147 ಮೀಟರ್ ರಸ್ತೆಯ ಪೈಕಿ 52 ಮೀಟರ್ ಜಾಗವನ್ನು ಹಸಿರು ವಲಯವನ್ನಾಗಿ (ಗ್ರೀನ್ ಬ್ಯಾಚ್) ಬದಲಾಯಿಸಲಾಗಿದ್ದು, ಉಳಿದ ಭಾಗವನ್ನು ವಾಹನಗಳ ಪಾರ್ಕಿಂಗ್‌ಗೆ ಬಳಸಲಾಗುತ್ತಿದೆ. ಅಂದರೆ ಒಟ್ಟು ರಸ್ತೆಯ ಮೂರನೇ ಎರಡರಷ್ಟು ಭಾಗವು ಬಳಕೆಗೆ ಲಭ್ಯವಿಲ್ಲದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಗ್ರಾಹಕರ ಹಿತರಕ್ಷಣೆ ಮತ್ತು ಮುಂದಿನ ನಡೆ
2012ರಲ್ಲಿ ಆರಂಭಗೊಂಡ ಈ ಪ್ರೀಮಿಯಂ ಯೋಜನೆಯಲ್ಲಿ ಈಜುಕೊಳ, ಟೆನ್ನಿಸ್ ಕೋರ್ಟ್ ಹಾಗೂ ರಸ್ತೆಗಳ ಬೃಹತ್ ಭರವಸೆಗಳನ್ನು ನೀಡಲಾಗಿತ್ತು. ಆದರೆ, ವಾಸ್ತವದಲ್ಲಿ ತಮಗೆ ಸೂಕ್ತ ಸೌಲಭ್ಯ ಸಿಕ್ಕಿಲ್ಲ ಮತ್ತು ಯೋಜನೆಯು ಕೃಷಿ ಭೂಮಿಯಿಂದ ಸುತ್ತವರಿದು ರಸ್ತೆ ಸಂಪರ್ಕದ ಕೊರತೆ ಎದುರಿಸುತ್ತಿದೆ ಎಂದು ಐದು ಜನ ಮನೆ ಖರೀದಿದಾರರು ಗ್ರಾಹಕ ನ್ಯಾಯಾಲಯಕ್ಕೆ (NCDRC) ದೂರು ನೀಡಿದ್ದರು. ಪ್ರಕರಣವು ಈಗ ಸುಪ್ರೀಂ ಕೋರ್ಟ್ ತಲುಪಿದ್ದು, ದೇಶದಾದ್ಯಂತ ಸಾಮಾನ್ಯ ಮನೆ ಖರೀದಿದಾರರಿಗೆ ಬಿಲ್ಡರ್‌ಗಳು ಮೋಸ ಮಾಡುವುದನ್ನು ತಡೆಯಲು ಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಸಿಬಿಐಗೆ ಈ ಕುರಿತು ಮತ್ತಷ್ಟು ಸಮಗ್ರ ತನಿಖೆ ನಡೆಸಲು ಸೂಚಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ : ಭಾರತದಲ್ಲಿ ಸ್ಯಾಮ್‌ಸಂಗ್ ಫೋನ್‌ಗಳ ಬೆಲೆ ಏರಿಕೆ ; A17, A27, F17, A07 5G ಗ್ರಾಹಕರಿಗೆ ಶಾಕ್!



















