ಹೊಸದಿಲ್ಲಿ : ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮಿರ್, ಬ್ರಿಟಿಷ್ ಪೌರತ್ವ ಪಡೆದ ಬಳಿಕ ಇನ್ನು ಮುಂದೆ ತಾನು ಪಾಕಿಸ್ತಾನ ಪರ ಕ್ರಿಕೆಟ್ ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವ ಅವರ ಅಧ್ಯಾಯ ಅಧಿಕೃತವಾಗಿ ಅಂತ್ಯಗೊಂಡಿದೆ. ಬ್ರಿಟಿಷ್ ಪೌರತ್ವ ಪಡೆದಿರುವ ಆಮಿರ್, ಇದೀಗ ಇಂಗ್ಲೆಂಡ್ನಲ್ಲಿ ಸ್ಥಳೀಯ ಆಟಗಾರನ ಸ್ಥಾನಮಾನ ಹೊಂದಿದ್ದು, ಅಲ್ಲಿನ ದೇಶಿ ಟೂರ್ನಿಗಳಲ್ಲಿ ಮುಂದುವರಿಯಲಿದ್ದಾರೆ. ಅದೇ ವೇಳೆ, ಪಾಕಿಸ್ತಾನ ಸೂಪರ್ ಲೀಗ್ (PSL) ನಲ್ಲಿ ‘ವಿದೇಶಿ ಆಟಗಾರ’ನ ಕೋಟಾದಡಿ ಆಡಲು ಸಿದ್ಧವಿರುವುದಾಗಿಯೂ ಅವರು ತಿಳಿಸಿದ್ದಾರೆ.
ಕ್ರಿಕೆಟ್ ಪತ್ರಕರ್ತ ಹಾಗೂ ಯೂಟ್ಯೂಬರ್ ಮುಹಮ್ಮದ್ ಫುರ್ಕಾನ್ ಭಟ್ಟಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಆಮಿರ್, ತಮಗೆ ಪಾಕಿಸ್ತಾನದ ಪರವಾಗಿ ಆಡಲು ಏಕೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. “ನಾನೀಗ ಬ್ರಿಟನ್ನ ಸ್ಥಳೀಯ ಆಟಗಾರ. ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ ಅಥವಾ ದಿ ಹಂಡ್ರೆಡ್ನಂತಹ ಟೂರ್ನಿಗಳಲ್ಲಿ ಸ್ಥಳೀಯ ಆಟಗಾರನಾಗಿ ಪಾಲ್ಗೊಳ್ಳಬೇಕಾದರೆ, ‘ನಾವು ಸ್ಥಳೀಯ ಆಟಗಾರರಾಗಿ ಬೇರೆ ಯಾವುದೇ ದೇಶವನ್ನು ಪ್ರತಿನಿಧಿಸುವುದಿಲ್ಲ’ ಎಂಬ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಹಾಗಾಗಿ, ಪಾಕಿಸ್ತಾನದ ಪರ ಆಡುವ ನನ್ನ ಅಧ್ಯಾಯ ಈಗ ಮುಕ್ತಾಯಗೊಂಡಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬ್ರಿಟಿಷ್ ಪೌರತ್ವ ಮತ್ತು ಇಂಗ್ಲೆಂಡ್ನಲ್ಲಿ ಅವಕಾಶಗಳು
2024ರ ಡಿಸೆಂಬರ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಮೊಹಮ್ಮದ್ ಆಮಿರ್, ಬ್ರಿಟಿಷ್ ಪ್ರಜೆಯಾಗಿರುವ ನರ್ಜಿಸ್ ಖಾನ್ ಅವರನ್ನು ವಿವಾಹವಾದ ಬಳಿಕ ಬ್ರಿಟಿಷ್ ಪೌರತ್ವ ಪಡೆದುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬ್ರಿಟನ್ನಲ್ಲೇ ನೆಲೆಸಿರುವ ಅವರು, ಇಂಗ್ಲೆಂಡ್ನ ದೇಶಿ ಕ್ರಿಕೆಟ್ ಹಾಗೂ ಫ್ರಾಂಚೈಸಿ ಲೀಗ್ಗಳಲ್ಲಿ ಸಕ್ರಿಯರಾಗಿದ್ದಾರೆ. ಬ್ರಿಟಿಷ್ ಪೌರತ್ವ ಹೊಂದಿರುವ ಕಾರಣ, ನಾಟಿಂಗ್ಹ್ಯಾಮ್ಶೈರ್ ತಂಡವು ಅವರನ್ನು 2026ರ ಟಿ20 ಬ್ಲಾಸ್ಟ್ ಟೂರ್ನಿಗೆ ‘ವಿದೇಶಿ ಆಟಗಾರ’ನ ಬದಲಿಗೆ ಸ್ಥಳೀಯ ಆಟಗಾರನನ್ನಾಗಿಯೇ ಒಪ್ಪಂದ ಮಾಡಿಕೊಂಡಿದೆ. ಇದೇ ನಿಯಮದಡಿ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನೂ ಅವರು ಪ್ರತಿನಿಧಿಸುತ್ತಿದ್ದಾರೆ.
ವಿದೇಶಿ ಆಟಗಾರನಾಗಿ ಪಿಎಸ್ಎಲ್ ಆಡಲು ಸೈ
ಪಾಕಿಸ್ತಾನದ ಪರ ಆಡುವ ಸಾಧ್ಯತೆ ಇಲ್ಲದಿದ್ದರೂ, ಪಾಕಿಸ್ತಾನದ ಪ್ರಮುಖ ಫ್ರಾಂಚೈಸಿ ಟೂರ್ನಿಯಾದ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL) ಆಡಲು ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಆಮಿರ್ ಹೇಳಿದ್ದಾರೆ. ಆದರೆ, ಸ್ಥಳೀಯ ಆಟಗಾರನ ಬದಲಾಗಿ ‘ವಿದೇಶಿ ಆಟಗಾರ’ನ ಕೋಟಾದಡಿ ಪಿಎಸ್ಎಲ್ನಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. 2026ರ ಪಿಎಸ್ಎಲ್ ಆವೃತ್ತಿಯಲ್ಲಿ ರಾವಲ್ಪಿಂಡಿ ತಂಡವನ್ನು ಪ್ರತಿನಿಧಿಸಿದ್ದ ಆಮಿರ್, ಮುಂದಿನ ಆವೃತ್ತಿಗಳಲ್ಲಿ ವಿದೇಶಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾಕಿಸ್ತಾನದ ಪರ 147 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮೊಹಮ್ಮದ್ ಆಮಿರ್ (ಟೆಸ್ಟ್, ಏಕದಿನ ಮತ್ತು ಟಿ20) ಒಟ್ಟು 259 ವಿಕೆಟ್ಗಳನ್ನು ಕಬಳಿಸಿದ್ದಾರೆ. ವಿಶೇಷವಾಗಿ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ : ಪಾಕ್ ಆಟಗಾರನ ನೌಟಂಕಿ ಆಟ, ಸುಳ್ಳು ಗಾಯದ ನೆಪವೊಡ್ಡಿದ್ದಾರೆಂದು ಮಾಜಿ ಆಯ್ಕೆಗಾರನ ಆರೋಪ!


















