ಬೆಂಗಳೂರು : ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ತನ್ನ ಜನಪ್ರಿಯ ಹಾಗೂ ಅತ್ಯಂತ ಯಶಸ್ವಿ ‘ರೇಂಜ್ ರೋವರ್ ಸ್ಪೋರ್ಟ್’ ಮಾದರಿಯ ಇಪ್ಪತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಬಹುನಿರೀಕ್ಷಿತ ‘ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಎಡಿಷನ್’ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ವಿಶೇಷ ಮತ್ತು ಸೀಮಿತ ಆವೃತ್ತಿಯ (ಲಿಮಿಟೆಡ್ ಎಡಿಷನ್) ಎಸ್‌ಯುವಿಯ ಎಕ್ಸ್ ಶೋರೂಮ್ ಬೆಲೆಯನ್ನು 1.90 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದ್ದು, 2026ರ ಅಕ್ಟೋಬರ್‌ನಿಂದ ಗ್ರಾಹಕರಿಗೆ ವಿತರಣೆ (ಡೆಲಿವರಿ) ಆರಂಭವಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
2004ರ ಡೆಟ್ರಾಯಿಟ್ ಆಟೋ ಶೋನಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಪ್ರದರ್ಶಿಸಿದ್ದ ‘ರೇಂಜ್ ಸ್ಟಾರ್ಮರ್’ ಕಾನ್ಸೆಪ್ಟ್ ಕಾರಿನಿಂದ ಈ ಹೊಸ ಆವೃತ್ತಿಯು ಸ್ಫೂರ್ತಿ ಪಡೆದಿದೆ. 2005ರಲ್ಲಿ ಜಗತ್ತಿಗೆ ಪರಿಚಯಿಸಲಾದ ರೇಂಜ್ ರೋವರ್ ಸ್ಪೋರ್ಟ್‌ನ ಇಪ್ಪತ್ತು ವರ್ಷಗಳ ಯಶಸ್ಸಿನ ಸಂಭ್ರಮಾಚರಣೆಯ ಪ್ರತೀಕವಾಗಿ ಇದನ್ನು ಮಾರುಕಟ್ಟೆಗೆ ತರಲಾಗಿದೆ.
ಈ ಮಾಡೆಲ್ ಒಟ್ಟು ಮೂರು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸ್ಯಾಂಟೊರಿನಿ ಬ್ಲ್ಯಾಕ್ ಮತ್ತು ಓಸ್ಟುನಿ ಪರ್ಲ್ ವೈಟ್ ಜತೆಗೆ, ವಿಶೇಷವಾಗಿ ಅಭಿವೃದ್ಧಿಪಡಿಸಲಾದ ‘ಸಾಂಗ್ವಿನೆಲ್ಲೊ ಆರೆಂಜ್’ ಬಣ್ಣದ ಆಯ್ಕೆಯೂ ಇದೆ. ಈ ಕಿತ್ತಳೆ ಬಣ್ಣವು, 2005ರ ವೆಸುವಿಯಸ್ ಆರೆಂಜ್ ಫಸ್ಟ್ ಎಡಿಷನ್ ಮತ್ತು ಮೂಲ ಸ್ಟಾರ್ಮರ್ ಕಾನ್ಸೆಪ್ಟ್‌ನಿಂದ ಪ್ರೇರಿತವಾಗಿದೆ.
ಆಕರ್ಷಕ ಹೊರನೋಟ: 23-ಇಂಚಿನ ಅಲಾಯ್ ವೀಲ್ಸ್
ಹೊಸ ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಎಡಿಷನ್‌ನ ಹೊರನೋಟವು ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ‘ಬ್ಲ್ಯಾಕ್ ಎಕ್ಸ್‌ಟೀರಿಯರ್ ಪ್ಯಾಕ್’ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕ್ ಕಪ್ಪು ಬಣ್ಣದ ಛಾವಣಿ (ರೂಫ್) ಮತ್ತು ಔಟ್‌ಸೈಡ್ ರಿಯರ್ ವ್ಯೂ ಮಿರರ್ ಸೇರಿದಂತೆ ಹೊರಭಾಗದ ಇತರೆ ಕೆಲವು ಭಾಗಗಳಿಗೆ ಕಪ್ಪು ಬಣ್ಣವನ್ನು ಒದಗಿಸುತ್ತದೆ. ಕಾರಿನ ಆಯ್ದ ಭಾಗಗಳಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿರುವ ಎಂಬ ಬ್ಯಾಡ್ಜಿಂಗ್ ಇದರ ವಿಶಿಷ್ಟತೆಯನ್ನು ಸಾರುತ್ತದೆ. ಇನ್ನು ಐಷಾರಾಮಿ ನೋಟವನ್ನು ಹೆಚ್ಚಿಸಲು 23 ಇಂಚಿನ ಗ್ಲಾಸ್ ಸ್ಪಾರ್ಕಲ್ ಸಿಲ್ವರ್ ವೀಲ್‌ಗಳು ಲಭ್ಯವಿದ್ದು, ಆಸಕ್ತರು ಗ್ಲಾಸ್ ಬ್ಲ್ಯಾಕ್ ಅಲಾಯ್ ವೀಲ್‌ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಐಷಾರಾಮಿ ಮತ್ತು ಕತ್ತಲ ಆಕರ್ಷಣೆಯ ಒಳಾಂಗಣ
ಈ ವಿಶೇಷ ಆವೃತ್ತಿಯ ಕಾರಿನ ಒಳಾಂಗಣ ವಿನ್ಯಾಸವು ಹೊರಭಾಗಕ್ಕಿಂತಲೂ ಹೆಚ್ಚು ಗಮನ ಸೆಳೆಯುತ್ತದೆ. ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಇಲ್ಯುಮಿನೇಟೆಡ್ ‘TWENTY EDITION’ ಎಂಬ ಬ್ಯಾಡ್ಜಿಂಗ್ ಕಣ್ಣಿಗೆ ಬೀಳುತ್ತದೆ. ಕಾರ್ಬನ್ ವಿನೀರ್‌ನಿಂದ ಸಿದ್ಧವಾಗಿರುವ ಸೆಂಟರ್ ಕನ್ಸೋಲ್‌ನಲ್ಲಿಯೂ ಈ ಬರಹವನ್ನು ಕಾಣಬಹುದು.
ಕಪ್ಪು ಬಣ್ಣದ ಥೀಮ್ ಹೊಂದಿರುವ ಒಳಾಂಗಣವು ಬ್ಲ್ಯಾಕ್ ಸ್ವೀಡ್ (suede) ಹೆಡ್‌ಲೈನರ್‌ನೊಂದಿಗೆ ಬರುತ್ತದೆ. ಇದು ಕಾರಿನ ಕ್ಯಾಬಿನ್‌ಗೆ ಕ್ರಿಯಾತ್ಮಕ ಹಾಗೂ ಕತ್ತಲ ಆಕರ್ಷಣೆ (ಡಾರ್ಕ್ ಆಂಬಿಯೆನ್ಸ್) ನೀಡುತ್ತದೆ. ಇದರೊಂದಿಗೆ, ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿ (SV) ನಿಂದ ಸ್ಫೂರ್ತಿ ಪಡೆದ ಎಬೊನಿ ವಿಂಡ್ಸರ್ (Ebony Windsor) ಸೀಟ್‌ಗಳನ್ನು ನೀಡಲಾಗಿದ್ದು, ಇದು ಗರಿಷ್ಠ ಮಟ್ಟದ ಕಂಫರ್ಟ್ ಒದಗಿಸುತ್ತದೆ. ಆಕ್ಟಿವ್ ಏರ್ ಸಸ್ಪೆನ್ಷನ್, ಮೆರಿಡಿಯನ್ ಆಡಿಯೋ ಸಿಸ್ಟಮ್, ಆಲ್-ವೀಲ್ ಸ್ಟೀರಿಂಗ್, ಟೆರೈನ್ ರೆಸ್ಪಾನ್ಸ್ ಮೋಡ್ಸ್ ಸೇರಿದಂತೆ ಹಲವು ನವೀನ ಫೀಚರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಪವರ್‌ಫುಲ್ ವಿ8 (V8) ಎಂಜಿನ್ ಮತ್ತು ಪರ್ಫಾರ್ಮೆನ್ಸ್
ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಎಡಿಷನ್ ಎಂಜಿನ್ ವಿಭಾಗದಲ್ಲಿ ಯಾವ ಬದಲಾವಣೆಗಳೂ ಆಗಿಲ್ಲ. ಈ ಐಷಾರಾಮಿ ಎಸ್‌ಯುವಿಯು ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನಿಂದ ಬೆಂಬಲಿತವಾದ 4.4 ಲೀಟರ್ ಟ್ವಿನ್-ಟರ್ಬೊ ವಿ8 (V8) ಎಂಜಿನ್ ಹೊಂದಿದೆ. ಇದು ಗರಿಷ್ಠ 537 hp ಪವರ್ ಹಾಗೂ 750Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಟು ಹಂತದ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬರುವ ಈ ಎಂಜಿನ್, ಕಾರಿನ ಅದ್ಭುತ ಚಾಲನಾ ಅನುಭವಕ್ಕೆ ಕಾರಣವಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಹೇಳಿಕೊಂಡಿರುವಂತೆ ಈ ವಾಹನ ಕೇವಲ 4.5 ಸೆಕೆಂಡುಗಳಲ್ಲಿ ಶೂನ್ಯದಿಂದ ನೂರು ಕಿಲೋಮೀಟರ್ ವೇಗವನ್ನು ತಲುಪುವ ಮೂಲಕ ಕ್ರೀಡಾ ಕಾರುಗಳಿಗೇ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ : ಜಪಾನ್‌ನ ಕಳಪೆ ವ್ಯವಸ್ಥೆಗೆ BCCI ಗರಂ : ಏಷ್ಯನ್ ಗೇಮ್ಸ್‌ನಿಂದ ಸ್ಟಾರ್ ಆಟಗಾರರು, ಸೂರ್ಯವಂಶಿ ಔಟ್?



















