ಬೆಂಗಳೂರು : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ದಿನಕ್ಕೊಂದು ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಆ ಸಾಲಿಗೆ ಇದೀಗ ಹೊಸ ಸೇರ್ಪಡೆಯಾಗಿದೆ ‘ಪರ್ಪ್ಲೆಕ್ಸಿಟಿ ಪೋರ್ಟಬಲ್ ಕಂಪ್ಯೂಟರ್’ (Perplexity’s Portable Computer). ಈ ವರ್ಷದ ಫೆಬ್ರವರಿಯಲ್ಲಿ ‘ಪರ್ಪ್ಲೆಕ್ಸಿಟಿ ಕಂಪ್ಯೂಟರ್ ಎಐ ಏಜೆಂಟ್’ ಅನ್ನು ಬಿಡುಗಡೆ ಮಾಡಿದ್ದ ಕಂಪನಿಯು, ಇದೀಗ ಅದರ ಮುಂದುವರಿದ ಭಾಗವಾಗಿ ಪೋರ್ಟಬಲ್ ಕಂಪ್ಯೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ವ್ಯವಸ್ಥೆಯು ಕ್ಲೌಡ್ ಕಂಪ್ಯೂಟಿಂಗ್ ಅನ್ನು ಅವಲಂಬಿಸಿತ್ತು. ಆದರೆ, ಹೊಸ ಪೋರ್ಟಬಲ್ ಕಂಪ್ಯೂಟರ್ ಎಡ್ಜ್ ಡಿವೈಸ್‌ಗಳ ಮೇಲೆಯೇ ನೇರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಹೊಸ ಪೋರ್ಟಬಲ್ ಕಂಪ್ಯೂಟರ್ ‘ಎನ್ವಿಡಿಯಾ ಡಿಜಿಎಕ್ಸ್ ಸ್ಪಾರ್ಕ್’ ನಿಯಂತ್ರಣದಲ್ಲಿ ಕ್ವೆನ್ ಎಐ ಮಾದರಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಬಳಕೆದಾರರಿಗೆ ತಮ್ಮ ಡೇಟಾ ಹಾಗೂ ಫೈಲ್‌ಗಳನ್ನು ಸ್ಥಳೀಯವಾಗಿ ಉಳಿಸಿಕೊಳ್ಳಲು, ವಿಶ್ಲೇಷಿಸಲು ಹಾಗೂ ಸಂಕೀರ್ಣ ಕಾರ್ಯಗಳನ್ನು ಎಡ್ಜ್ ಡಿವೈಸ್‌ಗಳಲ್ಲೇ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅರ್ವಿಂದ್ ಶ್ರೀನಿವಾಸ್ ನೇತೃತ್ವದ ಕಂಪನಿಯು ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಆರ್ಚೆಸ್ಟ್ರೇಟರ್, ಪ್ಲಾನರ್, ಟೂಲ್ ರೌಟರ್, ಶೆಡ್ಯೂಲರ್, ಡ್ಯೂರಬಲ್ ಟಾಸ್ಕ್ ಕ್ಯೂ ಮತ್ತು ಲೋಕಲ್ ಸರ್ಚ್ ಇಂಡೆಕ್ಸ್ ಅನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಎಐ ಏಜೆಂಟ್ ಸ್ಥಳೀಯ ಫೈಲ್‌ಗಳನ್ನು ಓದುವ ಹಾಗೂ ದಾಖಲೆಗಳನ್ನು ತ್ವರಿತವಾಗಿ ಶೋಧಿಸುವ ಕೆಲಸವನ್ನು ಅತ್ಯಂತ ಸುಲಭವಾಗಿ ಸಾಧಿಸುತ್ತದೆ.
ವಿಶೇಷ ಕ್ಲೌಡ್ ತಂತ್ರಜ್ಞಾನ ವ್ಯವಸ್ಥೆ
ಸಾಮಾನ್ಯ ಕಾರ್ಯಗಳನ್ನು ಸಾಧನದೊಳಗೇ ನಿರ್ವಹಿಸುವ ಈ ಪೋರ್ಟಬಲ್ ಕಂಪ್ಯೂಟರ್, ಸಂಕೀರ್ಣವಾದ ತಾಂತ್ರಿಕ ಕಾರ್ಯಗಳಿಗೆ ನೆರವಾಗಲು ಕ್ಲೌಡ್ ವ್ಯವಸ್ಥೆಗೆ ಸಂಪರ್ಕ ಕಲ್ಪಿಸುವ ಅವಕಾಶವನ್ನೂ ನೀಡುತ್ತದೆ. ಬಳಕೆದಾರರ ಅನುಮತಿಯ ಮೇರೆಗೆ, ಹೆಚ್ಚು ಸುಧಾರಿತ ಮಾಹಿತಿಗಾಗಿ ಅಥವಾ 15ಕ್ಕೂ ಹೆಚ್ಚು ಎಐ ಮಾದರಿಗಳ ನೆರವು ಪಡೆಯಲು ಇದು ಕ್ಲೌಡ್‌ಗೆ ಎಸ್ಕೆಲೇಟ್ (Escalate) ಆಗುತ್ತದೆ. ಉದಾಹರಣೆಗೆ, ಅತ್ಯಂತ ಗೌಪ್ಯವಾದ ಒಪ್ಪಂದದ ವಿವರಗಳು ಸಾಧನದಲ್ಲಿಯೇ ಸ್ಥಳೀಯವಾಗಿ ಉಳಿಯಬಹುದು, ಆದರೆ ಪ್ರಸ್ತುತ ಮಾರುಕಟ್ಟೆಯ ಇತ್ತೀಚಿನ ಒಪ್ಪಂದಗಳು ಅಥವಾ ಆರ್ಥಿಕ ವಿವರಗಳನ್ನು ಪಡೆಯಲು ಕ್ಲೌಡ್ ವ್ಯವಸ್ಥೆಯ ಸಹಾಯವನ್ನು ಪಡೆಯಬಹುದು ಎಂದು ಪರ್ಪ್ಲೆಕ್ಸಿಟಿ ಕಂಪನಿ ವಿವರಿಸಿದೆ.
ಲಭ್ಯತೆ ವಿಚಾರ
ಪ್ರಸ್ತುತ ಬಿಡುಗಡೆಯಾಗಿರುವ ಈ ಪೋರ್ಟಬಲ್ ಕಂಪ್ಯೂಟರ್ ಎನ್ವಿಡಿಯಾ ಡಿಜಿಎಕ್ಸ್ ಸ್ಪಾರ್ಕ್ ಬಳಸುತ್ತಿರುವ ‘ಪ್ರೊ’ (Pro) ಮತ್ತು ‘ಮ್ಯಾಕ್ಸ್’ ಚಂದಾದಾರರಿಗೆ ಮಾತ್ರ ಲಭ್ಯವಿದೆ. ಸದ್ಯಕ್ಕೆ ಲಿನಕ್ಸ್ ಸಾಧನಗಳಿಗೆ ಮಾತ್ರ ಬಿಡುಗಡೆಯಾಗಿರುವ ಈ ವ್ಯವಸ್ಥೆಯು, ಶೀಘ್ರದಲ್ಲೇ ವಿಂಡೋಸ್ ಮತ್ತು ಎನ್ವಿಡಿಯಾ ಆರ್‌ಟಿಎಕ್ಸ್ ಜಿಪಿಯು ಪಿಸಿಗಳಿಗೂ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಇದು ಪ್ರಸ್ತುತ ‘ಕ್ವೆನ್ 3.8 27B’ ಅಥವಾ ‘ಪಿಪಿಎಲ್ಎಕ್ಸ್ 27B’ ಎಐ ಮಾದರಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಎನ್ವಿಡಿಯಾ ನೆಮೊಟ್ರಾನ್ 3.5 ಲೈಟ್ನಿಂಗ್ ಎಂಬ ಹೊಸ ಓಪನ್ ಮಾಡೆಲ್ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಿದೆ.
ಇದನ್ನೂ ಓದಿ : ಪುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ 536 ವ್ಯಾಪಾರಿಗಳಿಗೆ 8.97 ಲಕ್ಷ ದಂಡ!



















