ಬೆಂಗಳೂರು : 2026ರ ಬಹುನಿರೀಕ್ಷಿತ ಕನ್ನಡದ ಹೈವೋಲ್ಟೇಜ್ ಚಿತ್ರ ‘ಟಾಕ್ಸಿಕ್’ ಇಂದು ವಿಶ್ವದಾದ್ಯಂತ ತೆರೆಕಂಡಿದ್ದು, ಯಶ್ ಅಭಿಮಾನಿಗಳಲ್ಲಿ ಸಂಭ್ರಮ ಜೋರಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳಿಂದ ಯಶ್ ಅವರ ಕನಸಿನ ಸಿನಿಮಾ ಎಂದೇ ನಿರೀಕ್ಷೆ ಮೂಡಿಸಿದ್ದ ‘ಟಾಕ್ಸಿಕ್’ ಈಗ ಅಭಿಮಾನಿಗಳ ಮುಂದೆ ಬಂದಿದೆ. ವಿಶ್ವದಾದ್ಯಂತ 80 ದೇಶಗಳಲ್ಲಿ ಸುಮಾರು 12,000 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರಿನಲ್ಲೂ ‘ಟಾಕ್ಸಿಕ್’ ಹವಾ ಜೋರಾಗಿದ್ದು, ಬೆಳ್ಳಂಬೆಳಗ್ಗೆಯೇ ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮೆಜೆಸ್ಟಿಕ್‌ನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಸಂತೋಷ್ ಚಿತ್ರಮಂದಿರದಲ್ಲಿ ಐದು ಆಟಗಳು ಭರ್ತಿಯಾಗಿವೆ. ಗಾಂಧಿನಗರ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ‘ಟಾಕ್ಸಿಕ್’ ಸಂಭ್ರಮ ಮನೆ ಮಾಡಿದೆ.
ಬೆಂಗಳೂರಿನಲ್ಲಿ 34 ಕಡೆ ಹೌಸ್‌ಫುಲ್ ಓಪನಿಂಗ್ ಕಂಡಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲೂ ಉತ್ತಮ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದಾರೆ. ವಿಶೇಷವಾಗಿ ಕನ್ನಡ ವರ್ಷನ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಇನ್ನು ಮುಂಬೈ ಮತ್ತು ದೆಹಲಿಯಲ್ಲಿ ‘ಟಾಕ್ಸಿಕ್’ಗೆ ಆರಂಭಿಕವಾಗಿ ಸರಾಸರಿ ಸ್ವಾಗತ ಸಿಕ್ಕಿದೆ. ಇದೇ ವೇಳೆ ‘ಕೆಜಿಎಫ್-2’ ದಾಖಲೆಗಳನ್ನು ಮುರಿಯುವ ನಿರೀಕ್ಷೆಯೊಂದಿಗೆ ತೆರೆಕಂಡಿರುವ ‘ಟಾಕ್ಸಿಕ್’, ಮೊದಲ ದಿನವೇ ಬಾಕ್ಸ್‌ಆಫೀಸ್‌ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಯಶ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ತೆರೆಗೆ ಬಂದಿದ್ದು, ಇದೀಗ ವಿಶ್ವದಾದ್ಯಂತ ‘ಟಾಕ್ಸಿಕ್’ ಜ್ವರ ಶುರುವಾಗಿದೆ.
ಇದನ್ನೂ ಓದಿ ; 2027ರ ಜನಗಣತಿಯಲ್ಲಿ ಭಿಕ್ಷುಕರು, ಅಲೆಮಾರಿಗಳಿಗೆ ಇಲ್ಲ ಪ್ರತ್ಯೇಕ ವರ್ಗ : ‘ಇತರರು’ ಪಟ್ಟಿಗೆ ಸೇರ್ಪಡೆ



















