ಬೆಂಗಳೂರು : ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಭರಾಟೆ ಜೋರಾಗುತ್ತಿರುವ ಬೆನ್ನಲ್ಲೇ, ಮಹೀಂದ್ರ ಸಂಸ್ಥೆಯು ತನ್ನ ಅತ್ಯಾಧುನಿಕ ‘ಮಹೀಂದ್ರ ಎಕ್ಸ್‌ಇವಿ 9ಎಸ್’ ಅನ್ನು ಪರಿಚಯಿಸುವ ಮೂಲಕ ಹೊಸ ಸಂಚಲನ ಮೂಡಿಸಿದೆ. ಕೇವಲ ಒಂದು ಎಲೆಕ್ಟ್ರಿಕ್ ಕಾರು ಎಂಬ ಹಣೆಪಟ್ಟಿಯಿಂದ ಹೊರಬಂದು, ಒಂದು ಪರಿಪೂರ್ಣ ಕೌಟುಂಬಿಕ ಎಸ್‌ಯುವಿ ಹೇಗಿರಬೇಕು ಎಂಬುದಕ್ಕೆ ಈ ವಾಹನ ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ. ಆರಂಭಿಕವಾಗಿ ಕೇವಲ 20.65 ಲಕ್ಷ ರೂಪಾಯಿಗಳ (ಎಕ್ಸ್-ಶೋರೂಂ) ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿರುವ ಈ ಕಾರು, ವಿಶಾಲವಾದ ಕ್ಯಾಬಿನ್, ದೀರ್ಘಾವಧಿಯ ರೇಂಜ್, ವೇಗದ ಚಾರ್ಜಿಂಗ್ ವ್ಯವಸ್ಥೆ ಹಾಗೂ ಮೈನವಿರೇಳಿಸುವ ತಂತ್ರಜ್ಞಾನವನ್ನು ಒಳಗೊಂಡು ಭಾರತದ ನಂಬರ್ 1 ಎಲೆಕ್ಟ್ರಿಕ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ಮಹೀಂದ್ರ XEV 9S ಕಾರಿನ ಪ್ರಮುಖ ಆಕರ್ಷಣೆ ಎಂದರೆ ಅದರ ಬೃಹತ್ ವಿನ್ಯಾಸ ಮತ್ತು ವಿಶಾಲವಾದ ಒಳಾಂಗಣ. 4,737 ಎಂಎಂ ಉದ್ದ ಹಾಗೂ 1,900 ಎಂಎಂ ಅಗಲವನ್ನು ಹೊಂದಿರುವ ಈ ಕಾರು ರಸ್ತೆಯಲ್ಲಿ ಗಂಭೀರವಾದ ನಿಲುವನ್ನು ಪ್ರದರ್ಶಿಸುತ್ತದೆ. ಮಹೀಂದ್ರ ಸಂಸ್ಥೆಯು ಅಭಿವೃದ್ಧಿಪಡಿಸಿರುವ ವಿಶೇಷ ‘ಇಂಗ್ಲೋ’ (INGLO) ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಬಳಸಿರುವುದರಿಂದ, ಈ ಹಿಂದೆ ಎಂಜಿನ್ ಮತ್ತು ಗೇರ್‌ಬಾಕ್ಸ್‌ಗೆ ಮೀಸಲಾಗಿದ್ದ ಜಾಗವೂ ಇದೀಗ ಪ್ರಯಾಣಿಕರಿಗೆ ಲಭ್ಯವಾಗಿದೆ. ಕಾರಿನ ಮೊದಲ ಎರಡು ಸಾಲುಗಳಲ್ಲಿ ಬರೋಬ್ಬರಿ 4,076 ಲೀಟರ್‌ಗಳಷ್ಟು ಕ್ಯಾಬಿನ್ ಸ್ಥಳಾವಕಾಶವಿದ್ದು, ಹಿಂಭಾಗದಲ್ಲಿ 527 ಲೀಟರ್‌ಗಳ ಬೂಟ್ ಸ್ಪೇಸ್ ಒದಗಿಸಲಾಗಿದೆ.
ಇದರ ಜೊತೆಗೆ ಮುಂಭಾಗದ ಬಾನೆಟ್ ಕೆಳಗೆ 150 ಲೀಟರ್‌ಗಳ ‘ಫ್ರಂಕ್’ ಜಾಗವಿದ್ದು, ಕುಟುಂಬದವರ ಎಲ್ಲಾ ಲಗೇಜ್‌ಗಳನ್ನು ಸುಲಭವಾಗಿ ಕೊಂಡೊಯ್ಯಬಹುದು. ಈ ವಾಹನವು ಆರು ಹಾಗೂ ಏಳು ಸೀಟುಗಳ ಆಯ್ಕೆಯಲ್ಲಿ ಲಭ್ಯವಿದ್ದು, ಎರಡನೇ ಸಾಲಿನ ಸೀಟುಗಳನ್ನು ಮುಂದಕ್ಕೆ-ಹಿಂದಕ್ಕೆ ಜರುಗಿಸುವ ಹಾಗೂ ವಾಲಿಸುವ ಸೌಲಭ್ಯವಿದೆ. ಉನ್ನತ ಶ್ರೇಣಿಯ ಮಾಡೆಲ್‌ಗಳಲ್ಲಿ ಎರಡನೇ ಸಾಲಿಗೆ ವೆಂಟಿಲೇಟೆಡ್ ಸೀಟುಗಳು, ವಿಂಡೋ ಸನ್‌ಶೇಡ್ ಹಾಗೂ ಮುಂಭಾಗದ ಪ್ರಯಾಣಿಕರ ಸೀಟಿಗೆ ಪವರ್ಡ್ ಬಾಸ್ ಮೋಡ್ ಅನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಟಾಟಾ ಸಿಯೆರಾ ಇವಿ, ಹ್ಯಾರಿಯರ್ ಇವಿ ಹಾಗೂ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರುಗಳು ಕೇವಲ ಐದು ಸೀಟುಗಳನ್ನು ಹೊಂದಿದ್ದರೆ, ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ ಕಾರು ಮೂರು ಸಾಲುಗಳನ್ನು ಹೊಂದಿದ್ದರೂ ಅದರ 490 ಕಿ.ಮೀ ರೇಂಜ್ ಮಹೀಂದ್ರ XEV 9S ಗಿಂತ ತೀರಾ ಕಡಿಮೆಯಿದೆ.
ದೀರ್ಘಾವಧಿಯ ಪ್ರಯಾಣಕ್ಕೆ ಹೇಳಿಮಾಡಿಸಿದ ಬ್ಯಾಟರಿ ಮತ್ತು ರೇಂಜ್
ದೂರದ ಪ್ರಯಾಣ ಮಾಡುವಾಗ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಗ್ರಾಹಕರಲ್ಲಿ ಕಾಡುವ ಅತಿದೊಡ್ಡ ಆತಂಕವೆಂದರೆ ಬ್ಯಾಟರಿ ರೇಂಜ್. ಆದರೆ ಮಹೀಂದ್ರ XEV 9S ಈ ಚಿಂತೆಯನ್ನು ಸಂಪೂರ್ಣವಾಗಿ ನಿವಾರಿಸಿದೆ. ಗ್ರಾಹಕರಿಗೆ 59 kWh, 70 kWh ಹಾಗೂ 79 kWh ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಅತ್ಯುನ್ನತ 79 kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 679 ಕಿಲೋಮೀಟರ್ (MIDC ಪ್ರಮಾಣೀಕೃತ) ಮೈಲೇಜ್ ನೀಡುತ್ತದೆ. ನೈಜ ರಸ್ತೆ ಪರಿಸ್ಥಿತಿಯಲ್ಲೂ ಇದು ಸುಮಾರು 500 ಕಿಲೋಮೀಟರ್‌ಗಳವರೆಗೆ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತದೆ. ಚಾರ್ಜಿಂಗ್ ವಿಷಯದಲ್ಲೂ ಈ ಕಾರು ಅತ್ಯಂತ ವೇಗವಾಗಿದ್ದು, ಮಹೀಂದ್ರದ 180 kW ‘ಚಾರ್ಜ್ ಇನ್’ ಫಾಸ್ಟ್ ಚಾರ್ಜರ್ ಬಳಸಿದರೆ ಕೇವಲ 20 ನಿಮಿಷಗಳಲ್ಲಿ ಶೇಕಡಾ 20 ರಿಂದ 80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಅಂದರೆ ಹೈವೇಯಲ್ಲಿ ಕಾಫಿ ಕುಡಿಯುವಷ್ಟು ಸಣ್ಣ ವಿರಾಮದ ಸಮಯದಲ್ಲಿ ಕಾರು ಮತ್ತೆ 300 ಕಿಲೋಮೀಟರ್ ಚಲಿಸಲು ಸಜ್ಜಾಗಿರುತ್ತದೆ.
ಪವರ್‌ಫುಲ್ ಪರ್ಫಾರ್ಮೆನ್ಸ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ
ಒಂದು ಬೃಹತ್ ಕೌಟುಂಬಿಕ ಎಸ್‌ಯುವಿ ಕಾರಿಗೆ ಸ್ಪೋರ್ಟ್ಸ್ ಕಾರಿನ ವೇಗ ಅಗತ್ಯವಿಲ್ಲದಿದ್ದರೂ, ಮಹೀಂದ್ರ ಈ ವಿಷಯದಲ್ಲಿ ಭರ್ಜರಿ ಕಾರ್ಯಕ್ಷಮತೆಯನ್ನು ಒದಗಿಸಿದೆ. ಇದರ 79 kWh ಬ್ಯಾಟರಿ ಆವೃತ್ತಿಯು 282 ಬಿಎಚ್‌ಪಿ ಪವರ್ ಹಾಗೂ 380 ಎನ್‌ಎಂ ಟಾರ್ಕ್ ಉತ್ಪಾದಿಸುವ ಮೂಲಕ ಅದ್ಭುತ ಶಕ್ತಿಯನ್ನು ಪ್ರದರ್ಶಿಸುತ್ತದೆ. ಕೇವಲ ಏಳು ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಈ ಕಾರಿಗಿದೆ. ಹೆದ್ದಾರಿಯಲ್ಲಿ ಇತರ ವಾಹನಗಳನ್ನು ಹಿಂದಿಕ್ಕಲು ಆಕ್ಸಿಲರೇಟರ್ ಒತ್ತಿದಾಕ್ಷಣ ಯಾವುದೇ ವಿಳಂಬವಿಲ್ಲದೆ ಕಾರು ಮುನ್ನುಗ್ಗುತ್ತದೆ.
ರಿಯರ್ ವೀಲ್ ಡ್ರೈವ್, ಇಂಡಿಪೆಂಡೆಂಟ್ ಸಸ್ಪೆನ್ಷನ್ ಹಾಗೂ ಅಡಾಪ್ಟಿವ್ ಡ್ಯಾಂಪರ್‌ಗಳು ಕಾರಿನ ಚಾಲನಾ ಅನುಭವವನ್ನು ಮತ್ತಷ್ಟು ಐಷಾರಾಮಿಯಾಗಿಸುತ್ತವೆ. ಕ್ಯಾಬಿನ್ ಒಳಗೆ ಕಾಲಿಡುತ್ತಿದ್ದಂತೆ ಡ್ಯಾಶ್‌ಬೋರ್ಡ್‌ನಲ್ಲಿರುವ ಮೂರು 12.3 ಇಂಚಿನ ಬೃಹತ್ ಸ್ಕ್ರೀನ್‌ಗಳು ಕಣ್ಮನ ಸೆಳೆಯುತ್ತವೆ. ಇದರೊಂದಿಗೆ ಸ್ನ್ಯಾಪ್‌ಡ್ರ್ಯಾಗನ್ 8295 ಪ್ರೊಸೆಸರ್, ಆಗ್ಮೆಂಟೆಡ್ ರಿಯಾಲಿಟಿ ಹೆಡ್-ಅಪ್ ಡಿಸ್‌ಪ್ಲೇ, ಕನೆಕ್ಟೆಡ್ ಫಂಕ್ಷನ್ಸ್, ಆಟೋಪಾರ್ಕ್ ಅಸಿಸ್ಟ್ ಹಾಗೂ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನವಿರುವ 16 ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಕಾರಿನ ತಾಂತ್ರಿಕ ಶ್ರೀಮಂತಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ.
ಪ್ರಯಾಣಿಕರ ಸುರಕ್ಷತೆ ಮತ್ತು ಅತ್ಯಲ್ಪ ನಿರ್ವಹಣಾ ವೆಚ್ಚ
ಮಹೀಂದ್ರ ಕಾರುಗಳು ಮೊದಲಿನಿಂದಲೂ ಗಟ್ಟಿಮುಟ್ಟಾದ ವಿನ್ಯಾಸ ಹಾಗೂ ಸುರಕ್ಷತೆಗೆ ಹೆಸರುವಾಸಿ. ಲೆವೆಲ್ 2+ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ತಂತ್ರಜ್ಞಾನವನ್ನು ಹೊಂದಿರುವ ಈ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಸೆಂಟರಿಂಗ್ ಅಸಿಸ್ಟ್, ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್-ಸ್ಪಾಟ್ ಅಸಿಸ್ಟ್ ಮತ್ತು ಕ್ರಾಸ್-ಟ್ರಾಫಿಕ್ ಅಲರ್ಟ್‌ನಂತಹ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಇವೆ. ಇವುಗಳನ್ನು ನಿರ್ವಹಿಸಲು ಐದು ರಾಡಾರ್‌ಗಳು ಹಾಗೂ ಕ್ಯಾಮೆರಾಗಳನ್ನು ಬಳಸಲಾಗಿದೆ.
ಇದೊಂದು ಸಂಪೂರ್ಣ ಸಾಫ್ಟ್‌ವೇರ್ ಆಧಾರಿತ ವಾಹನವಾಗಿರುವುದರಿಂದ ಓವರ್-ದಿ-ಏರ್ (OTA) ಅಪ್‌ಡೇಟ್‌ಗಳ ಮೂಲಕ ಕಾರು ಖರೀದಿಸಿದ ಬಳಿಕವೂ ಭವಿಷ್ಯದಲ್ಲಿ ಹೊಸ ಫೀಚರ್‌ಗಳನ್ನು ಪಡೆಯುವ ಅವಕಾಶವಿದೆ. ಇಷ್ಟೆಲ್ಲಾ ಐಷಾರಾಮಿ ಸೌಲಭ್ಯಗಳಿದ್ದರೂ ಇದರ ನಿರ್ವಹಣಾ ವೆಚ್ಚ ಆಶ್ಚರ್ಯಕರ ರೀತಿಯಲ್ಲಿ ಕಡಿಮೆಯಿದೆ. ಮಹೀಂದ್ರ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ಈ ಕಾರನ್ನು ಚಲಾಯಿಸಲು ಪ್ರತಿ ಕಿಲೋಮೀಟರ್‌ಗೆ ಅಂದಾಜು 1.2 ರೂಪಾಯಿ ಖರ್ಚಾದರೆ, ಮೇಂಟೆನೆನ್ಸ್‌ಗೆ ಕೇವಲ 40 ಪೈಸೆ ವೆಚ್ಚವಾಗುತ್ತದೆ.
ದೊಡ್ಡ ಎಸ್‌ಯುವಿ ಕಾರುಗಳು ನಿರ್ವಹಣೆಗೆ ದುಬಾರಿ ಎಂಬ ಸಾಮಾನ್ಯ ತಪ್ಪು ಕಲ್ಪನೆಯನ್ನು ಮಹೀಂದ್ರ XEV 9S ಸಂಪೂರ್ಣವಾಗಿ ಸುಳ್ಳು ಮಾಡಿದೆ. ವಿಶಾಲವಾದ ಜಾಗ, ಕಣ್ಣುಕೋರೈಸುವ ತಂತ್ರಜ್ಞಾನ, ಐಷಾರಾಮಿ ಅನುಭವ ಹಾಗೂ ದೀರ್ಘಾವಧಿಯ ರೇಂಜ್ ಅನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡುವ ಮೂಲಕ, ಈ ಕಾರು ಭಾರತದ ಅತ್ಯುತ್ತಮ ಹಾಗೂ ನಂಬರ್ 1 ಕೌಟುಂಬಿಕ ಎಲೆಕ್ಟ್ರಿಕ್ ಎಸ್‌ಯುವಿ ಆಗಿ ಹೊರಹೊಮ್ಮಲು ಸಂಪೂರ್ಣ ಅರ್ಹವಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ 19 ಹುದ್ದೆಗಳ ನೇಮಕಾತಿ : 1.42 ಲಕ್ಷ ರೂಪಾಯಿ ಸ್ಯಾಲರಿ



















