ಬೆಂಗಳೂರು: ಪೋಷಕರು ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ಮಗು ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ.
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 15ರಂದು ಬೆಳಗ್ಗೆ ಸುಮಾರು 10.50ರ ವೇಳೆಗೆ ಈ ಅವಘಡ ಸಂಭವಿಸಿದೆ. ಮಗುವನ್ನು ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ವೇಳೆ, ಮಗು ಗ್ರಿಲ್ ಮೇಲೆ ಹತ್ತಿ ಆಯತಪ್ಪಿ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಬಳಿಕ ಮಗು ಬೌನ್ಸ್ ಆಗಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗು ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಕ್ಷಣ ಮಾತ್ರದಲ್ಲಿ ಮಗುವನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯ ಕೋರಮಂಗಲದ ಯಾದ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.



















