ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿ ಬೇಕಾಬಿಟ್ಟಿ ಕಾರು ಚಾಲನೆ ಮಾಡಿ ಇತರ ವಾಹನ ಸವಾರರನ್ನು ಬೆಚ್ಚಿಬೀಳಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಂ.ಜಿ. ರಸ್ತೆಯ ನಗರ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದ್ದು, ಹರಿಯಾಣ ಮೂಲದ ವ್ಯಕ್ತಿಗಳು ಕಾರಿನಲ್ಲಿ ಅವಾಂತರ ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ಯರ್ರಾಬಿರ್ರಿ ಕಾರು ಚಾಲನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ಕಾರಿನಲ್ಲಿದ್ದವರು ಮಾತಿನ ಚಕಮಕಿಗೆ ಇಳಿದಿದ್ದಾರೆ. ಪೊಲೀಸರಿಗೆ ಅವಾಜ್ ಹಾಕಿ ದುರ್ವರ್ತನೆ ತೋರಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪೊಲೀಸರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ದುರ್ವರ್ತನೆ ತೋರಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಕಾರನ್ನು ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಧ್ವಜಾರೋಹಣ ವೇಳೆ ತಲ್ವಾರ್ ಪ್ರದರ್ಶನ : ಓರ್ವನ ಬಂಧನ


















