ಬೆಂಗಳೂರು (ಆ.15) : 80ನೇ ಸ್ವಾತಂತ್ರ್ಯ ದಿನಕ್ಕೆ ಮಾಣಿಕ್ ಷಾ ಮೈದಾನದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಇದು ಮೊದಲ ಸ್ವಾತಂತ್ರ್ಯೋತ್ಸವ ಆಗಿದ್ದು, ಬೆಳಗ್ಗೆ 9 ಗಂಟೆಗೆ ಸಿಎಂ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮತ್ತೊಂದೆಡೆ ವಿಧಾನಸೌಧದಲ್ಲಿ ಫ್ರೀಡಂ ಹಬ್ಬ ನಡೆಯಲಿದ್ದು, ಅದಕ್ಕೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಇಂದು ರಾಜ್ಯ ರಾಜಧಾನಿಯಲ್ಲಿ ಸ್ವಾತಂತ್ರ್ಯ ಸಂಭ್ರಮ ಕಳೆಕಟ್ಟಿದೆ.
ಮಾಣಿಕ್ ಷಾ ಮೈದಾನದಲ್ಲಿ 1500 ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಭದ್ರತೆಗೆ 1583 ಮಂದಿ ಪೊಲೀಸರ ನಿಯೋಜನೆ ಜೊತೆಗೆ 110 ಸಿಸಿಟಿವಿ ಕ್ಯಾಮರಾ ಕಣ್ಣಾವಲು ಇಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
1583 ಸಿಬ್ಬಂದಿ ನಿಯೋಜನೆ
ಒಂಭತ್ತು ಮಂದಿ ಡಿಸಿಪಿಗಳು, 17 ACP, 49 ಇನ್ಸ್‌ಪೆಕ್ಟರ್, 106 PSI ಸೇರಿದಂತೆ 1100 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ಬಂದೋಬಸ್ತ್ಗಾಗಿ ನಿಯೋಜನೆ ಮಾಡಲಾಗಿದೆ. ಸಂಚಾರ ನಿರ್ವಹಣೆಗೆ ಮೂವರು ಡಿಸಿಪಿಗಳು ಸೇರಿ 1583 ಸಿಬ್ಬಂದಿ ಕಣ್ಣಾಗಾವಲಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಲಾಗಿದ್ದು, ಪಾಸ್ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತೆ. ಮೈದಾನದ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ನಿಲುಗಡೆಯನ್ನು ನಿಷೇಧ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ವರೆಗೆ ಹಾಗೂ ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ ವಾಹನ ನಿಲುಗಡೆಯನ್ನು ನಿಷೇಧ ಮಾಡಲಾಗಿದೆ.
ವಿಧಾನಸೌಧದಲ್ಲಿ ಫ್ರೀಡಂ ಹಬ್ಬ
80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ವಿಧಾನಸೌಧದಲ್ಲಿ ಫ್ರೀಡಂ ಹಬ್ಬ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ದಿನವಿಡೀ ನಡೆಯುವ ವೈವಿಧ್ಯ ಮಯ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ಸಿದ್ದತೆ ಮಾಡಲಾಗಿದೆ. ಆದರೆ, ಪ್ರವೇಶಾತಿಗೆ ಕ್ಯೂ ಆರ್ ಕೋಡ್ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ : 80ನೇ ಸ್ವಾತಂತ್ರ್ಯ ದಿನಾಚರಣೆ : ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಭಾಷಣ ನೇರ ಪ್ರಸಾರ!


















