ರಾಯ್‌ಪುರ : ನಾಗರಿಕ ಸೇವೆಗಳಿಗೆ ಸೇರ್ಪಡೆಯಾಗುವ ಮುನ್ನ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದ IPS ಅಧಿಕಾರಿಯೊಬ್ಬರ ಮೇಲೆ ಇದೀಗ ತಮ್ಮ ಮೊದಲ ಫೀಲ್ಡ್ ಪೋಸ್ಟಿಂಗ್‌ನಲ್ಲೇ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಛತ್ತೀಸ್‌ಗಢ ಕೇಡರ್‌ನ ಐಪಿಎಸ್ ಅಧಿಕಾರಿ ರಾಹುಲ್ ಬನ್ಸಲ್ ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಅವರು ಯುಪಿಎಸ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ನೀಡಿದ್ದ ಹಳೆಯ ಅಣಕು ಸಂದರ್ಶನದ (Mock Interview) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಆ ಹಳೆಯ ವಿಡಿಯೋದಲ್ಲಿ, ರಾಹುಲ್ ಬನ್ಸಲ್ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದರು. ಐಐಟಿ ಕಾನ್ಪುರದಲ್ಲಿ ಓದುತ್ತಿದ್ದ ತಮ್ಮ ಸಹೋದರನಿಗೆ ಅಮೆರಿಕಕ್ಕೆ ಸಂಶೋಧನಾ ಪ್ರಬಂಧ ಮಂಡಿಸಲು ಹೋಗಲು ವೀಸಾಕ್ಕಾಗಿ ತುರ್ತಾಗಿ ಜನನ ಪ್ರಮಾಣಪತ್ರ ಬೇಕಿತ್ತು. ಆಗ ಪಂಚಾಯತ್ ಅಧಿಕಾರಿಯೊಬ್ಬರು 500 ರೂಪಾಯಿ ಲಂಚ ಕೇಳಿದ್ದರು. ಆ ಹಣವನ್ನು ನೀಡುವಾಗ ನನ್ನ ಮನಸ್ಸಿಗೆ ತೀವ್ರ ನೋವಾಗಿತ್ತು ಎಂದು ಬನ್ಸಲ್ ಸಂದರ್ಶನ ಮಂಡಳಿಯ ಮುಂದೆ ಹೇಳಿಕೊಂಡಿದ್ದರು. ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅವರು, ಪೊಲೀಸ್ ವಲಯದಲ್ಲಿ ಸುಧಾರಣೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಮೊದಲ ಪೋಸ್ಟಿಂಗ್‌ನಲ್ಲೇ 1 ಕೋಟಿ ಲಂಚದ ಆರೋಪ!
ಕಾಲಚಕ್ರ ಉರುಳಿದಂತೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಅದೇ ಅಧಿಕಾರಿ ಈಗ ಕೋಟ್ಯಂತರ ರೂಪಾಯಿ ಲಂಚ ಪಡೆದ ಆರೋಪದ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಮೊದಲ ಫೀಲ್ಡ್ ಪೋಸ್ಟಿಂಗ್ ವೇಳೆಯಲ್ಲೇ ಅವರು 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 500 ರೂಪಾಯಿ ಲಂಚ ಕೊಟ್ಟು ನೊಂದಿದ್ದ ವ್ಯಕ್ತಿಯೊಬ್ಬರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ 1 ಕೋಟಿ ರೂಪಾಯಿ ಲಂಚ ಸ್ವೀಕರಿಸುವ ಹಂತಕ್ಕೆ ತಲುಪಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ನೆಟ್ಟಿಗರ ಆಕ್ರೋಶ
ಈ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ನಾಗರಿಕ ಸೇವಾ ಅಧಿಕಾರಿಗಳ ನೈತಿಕತೆ ಮತ್ತು ಪಾರದರ್ಶಕತೆಯ ಕುರಿತು ಭಾರೀ ಚರ್ಚೆ ಆರಂಭವಾಗಿದೆ. ಯುಪಿಎಸ್‌ಸಿ ತಯಾರಿಯ ಸಂದರ್ಭದಲ್ಲಿ ಸಮಾಜ ಸೇವೆಯ ಬಗ್ಗೆ ಆಡುವ ಮಾತುಗಳಿಗೂ, ಅಧಿಕಾರ ಸಿಕ್ಕ ನಂತರ ಕಂಡುಕೊಳ್ಳುವ ವಾಸ್ತವಕ್ಕೂ ಇರುವ ವ್ಯತ್ಯಾಸವನ್ನು ಜನರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಪ್ರಸ್ತುತ ಅಧಿಕಾರಿ ರಾಹುಲ್ ಬನ್ಸಲ್ ವಿರುದ್ಧ ತನಿಖೆ ಮುಂದುವರಿದಿದ್ದು, ಅವರದ್ದೇ ಹಳೆಯ ಮಾತುಗಳು ಈಗ ಅವರಿಗೆ ದೊಡ್ಡ ಮುಜುಗರವನ್ನು ತಂದೊಡ್ಡಿವೆ.
ಇದನ್ನೂ ಓದಿ : ನಗರದಲ್ಲಿ 5 ಕಮಿಷನರೇಟ್ ರಚನೆ ಮಾಹಿತಿ ಸೋರಿಕೆ ; 4 ಪೊಲೀಸ್ ಸಿಬ್ಬಂದಿ ಅಮಾನತು!


















