ಮಂಡ್ಯ : ಹೆದ್ದಾರಿಯಲ್ಲಿ ವಾಹನಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದು ಭೀಕರ ಸರಣಿ ಅಪಘಾತ ಸಂಭವಿಸಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಪುರ ಬಳಿ ನಡೆದಿದೆ. ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದ ಎರಡು ಬಸ್‌ಗಳು ಹಾಗೂ 407 ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ್ದು, ಎರಡೂ ಬಸ್‌ಗಳಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾರ್ಮೆಂಟ್ಸ್ ಉದ್ಯೋಗಿಗಳನ್ನು ಕರೆದುಕೊಂಡು ತೆರಳುತ್ತಿದ್ದ ಬಸ್‌ವೊಂದು ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಮತ್ತೊಂದು ಗಾರ್ಮೆಂಟ್ಸ್ ಬಸ್ ನಿಂತಿದ್ದ ಬಸ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡನೇ ಬಸ್ ಕೂಡ ನಿಂತುಕೊಂಡಿದ್ದು, ಅದರ ಹಿಂದೆ ಬರುತ್ತಿದ್ದ 407 ಕ್ಯಾಂಟರ್ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ.
ಸರಣಿ ಅಪಘಾತದಲ್ಲಿ ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದ ಎರಡು ಬಸ್‌ಗಳಲ್ಲಿದ್ದ 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತು ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಕಮಿಷನ್ ಆಸೆಗೆ ಬ್ಯಾಂಕ್ ಖಾತೆಗಳ ಮಾರಾಟ : ಡಿಜಿಟಲ್ ಅರೆಸ್ಟ್ ಕೇಸ್‌ನಲ್ಲಿ ಗುತ್ತಿಗೆದಾರನ ಬಂಧನ!



















