ಕಲಬುರಗಿ : ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಾಲನೆ ಮಾಡಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಬೆನ್ನಲ್ಲೇ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಕ ಬಸವರಾಜ ಹಾಗೂ ನಿರ್ಲಕ್ಷ್ಯ ವಹಿಸಿದ ಚಾಲಕ ಆಕಾಶ್ನನ್ನ ಅಮಾನತು ಮಾಡಿ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ಇಂದು ಆದೇಶ ಹೊರಡಿಸಿದ್ದಾರೆ.
ಆಗಿದ್ದೇನು?
ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಸಂಚರಿಸುತ್ತಿದ್ದ KA-28 F-1985 ನೋಂದಣಿ ಸಂಖ್ಯೆಯ ಕೆಕೆಆರ್‌ಟಿಸಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಬಸ್ಸಿನ ಹೆಡ್‌ಲೈಟ್‌ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದವು. ಆದರೆ, ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು ಅಥವಾ ಬದಲಿ ವ್ಯವಸ್ಥೆ ಮಾಡುವ ಬದಲು, ಚಾಲಕ ಮತ್ತು ಕಂಡಕ್ಟರ್ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ.
ಕಂಡಕ್ಟರ್ ಬಸ್ಸಿನ ಮುಂದಿನ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಆನ್ ಮಾಡಿ ದಾರಿ ತೋರಿಸುತ್ತಿದ್ದರೆ, ಚಾಲಕ ಬಸ್ ಓಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರಿ ಬಸ್‌ಗಳ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಇದೀಗ ಆಕ್ರೋಶದ ಬೆನ್ನಲ್ಲೆ ಸರ್ಕಾರ ಚಾಲಕ ಸೇರಿ ಮೂವರನ್ನು ಸಸ್ಪೆಂಡ್ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಪ್ರೀತಿಸಿ ಮದ್ವೆಯಾದ ಯುವ ಜೋಡಿಗೆ ಚಾಕು ಇರಿತ – ಪೊಲೀಸ್ ಠಾಣೆ ಆವರಣದಲ್ಲೇ ಹತ್ಯೆಗೆ ಯತ್ನ


















