ದಾವಣಗೆರೆ : ಪ್ರೀತಿಸಿ ಮದುವೆಯಾದ ಯುವ ಜೋಡಿಯ ಮೇಲೆ ಸಂಬಂಧಿಕರೇ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ಲೀಲಾವತಿ (18) ಹಾಗೂ ಕಂಚುಗಾರನಹಳ್ಳಿಯ ಸಿದ್ದೇಶ್ (22) ಪರಸ್ಪರ ಪ್ರೀತಿಸಿ ಇತ್ತೀಚೆಗೆ ವಿವಾಹವಾಗಿದ್ದರು. ತಮ್ಮ ಜೀವಕ್ಕೆ ಹುಡುಗಿಯ ಸಂಬಂಧಿಕರಿಂದ ಬೆದರಿಕೆ ಇದೆ ಎಂದು ಇಬ್ಬರೂ ದಾವಣಗೆರೆ ಎಸ್‌ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಲಾಗಿತ್ತು.
ಆದರೆ, ಜೋಡಿ ಠಾಣೆಗೆ ಆಗಮಿಸುತ್ತಿದ್ದಂತೆ ಹುಡುಗಿಯ ಸಂಬಂಧಿಕರಾದ ನಾಗರಾಜ್ ಹಾಗೂ ಇತರರು ಸಿದ್ದೇಶ್, ಲೀಲಾವತಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯಲ್ಲಿ ಸಿದ್ದೇಶ್ ಅವರ ಕೈಗೆ ಗಂಭೀರ ಗಾಯವಾಗಿದ್ದು, ಅವರನ್ನು ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬಂಟ್ವಾಳದಲ್ಲಿ ವಿದ್ಯಾರ್ಥಿನಿ ಮೇಲೆ ಪಾಗಲ್ ಪ್ರೇಮಿಯಿಂದ ಭೀಕರ ದಾಳಿ!


















