ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿಯ ಬಸ್ ನಿಲ್ದಾಣದಲ್ಲಿ ಸುಮಾರು 10 ರಿಂದ 15 ದಿನಗಳ ನವಜಾತ ಹೆಣ್ಣು ಶಿಶುವನ್ನು ಅಪರಿಚಿತರು ಕೈಚೀಲದಲ್ಲಿ ಬಟ್ಟೆಯಲ್ಲಿ ಸುತ್ತಿ, ಹಾಲಿನ ಬಾಟಲ್ ಜೊತೆಗೆ ಬಿಟ್ಟು ಹೋಗಿರುವ ಕರುಳು ಹಿಂಡುವ ಘಟನೆ ನಡೆದಿದೆ.

ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದ್ದು, ಸ್ಥಳ ಪರಿಶೀಲಿಸಿದಾಗ ಕೈಚೀಲದಲ್ಲಿದ್ದ ಮಗು ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಸುಮಾರು 1.6 ಕೆ.ಜಿ. ತೂಕವಿರುವ ಮಗು ಆರೋಗ್ಯವಾಗಿದ್ದು, ಮೊದಲಿಗೆ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಗುವನ್ನು ಯಾರು ಹಾಗೂ ಯಾವ ಕಾರಣಕ್ಕಾಗಿ ನಿರ್ಜನ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ರಾಜಾಜಿನಗರದಲ್ಲಿ ಕೈ-ಕೈ ಮಿಲಾಯಿಸಿದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ; ಹಲವರು ಪೊಲೀಸ್ ವಶಕ್ಕೆ!



















