ದಾವಣಗೆರೆ : ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಂಚನೆ ಪ್ರಕರಣಗಳ ಮೂಲಕ ಕುಖ್ಯಾತಿಯಾಗಿರುವ “ಸಿಗ್ಲಿ ಬಸ್ಯಾ” ಮತ್ತೆ ತನ್ನ ಹಳೆಯ ಕೈಚಳಕ ತೋರಿಸಿದ್ದಾನೆ. “ಆಡು ಮುಟ್ಟದ ಸೊಪ್ಪಿಲ್ಲ, ಸಿಗ್ಲಿ ಬಸ್ಯಾ ಕಳ್ಳತನ ಮಾಡದ ಮನೆಯಿಲ್ಲ” ಎಂಬ ಮಾತಿಗೆ ಹೆಸರಾದ ಈತ, ಈ ಬಾರಿ ಜಗಳೂರು ಪೊಲೀಸ್ ಠಾಣೆ ಪಕ್ಕದಲ್ಲೇ ವ್ಯಕ್ತಿಯೊಬ್ಬರಿಗೆ ₹70 ಸಾವಿರ ಪಂಗನಾಮ ಹಾಕಿರುವ ಆರೋಪ ಕೇಳಿಬಂದಿದೆ.
ನ್ಯಾಮತಿ ತಾಲೂಕಿನ ಸೂರಹೊನ್ನೆ ಗ್ರಾಮದ ಶಿವರಾಜ್ ಎಲ್.ಎನ್. (59) ಎಂಬುವರಿಗೆ ಸಿಗ್ಲಿ ಬಸ್ಯಾ 2025ರ ನವೆಂಬರ್ 12ರಂದು ದಾವಣಗೆರೆಯ ಶಾಮನೂರಿನಲ್ಲಿ ಪರಿಚಯವಾಗಿದ್ದನು. ತಾನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದವನು ಎಂದು ಹೇಳಿಕೊಂಡಿದ್ದ ಆತ, ತನ್ನ ಬಳಿ ಕಳ್ಳತನ ಮಾಡಿರುವ ಚಿನ್ನದ ದಾಸ್ತಾನು ಇದೆ ಎಂದು ನಂಬಿಸಿ ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ.
ನವೆಂಬರ್ 18ರಂದು ₹60 ಸಾವಿರ ಹಣದೊಂದಿಗೆ ಬಂದಿದ್ದ ಶಿವರಾಜ್ ಅವರನ್ನು ಜಗಳೂರಿಗೆ ಕರೆತಂದ ಸಿಗ್ಲಿ ಬಸ್ಯಾ, ಚಿನ್ನ ಇಲ್ಲೇ ಇದೆ ಎಂದು ಹೇಳಿ ಪೊಲೀಸ್ ಠಾಣೆ ಪಕ್ಕದ ಹೋಟೆಲ್‌ನಲ್ಲಿ ಟೀ ಕುಡಿದ ಬಳಿಕ ಹಣ ಪಡೆದುಕೊಂಡಿದ್ದಾನೆ. ಬಳಿಕ “ಚಿನ್ನ ತಂದುಕೊಡುತ್ತೇನೆ” ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದು, ತನ್ನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಘಟನೆಯ ಒಂದು ಗಂಟೆಯ ನಂತರ ಶಿವರಾಜ್ ಅವರಿಗೆ ಕರೆ ಮಾಡಿ ಮತ್ತೊಂದು ಸಂಖ್ಯೆಗೆ ₹5 ಸಾವಿರ ಫೋನ್‌ಪೇ ಮಾಡಲು ಹೇಳಿದ್ದಾನೆ. ನಂತರ ಎರಡು-ಮೂರು ದಿನಗಳ ಅಂತರದಲ್ಲಿ ಮತ್ತೆ ₹5 ಸಾವಿರ ಪಡೆದು ಒಟ್ಟು ₹70 ಸಾವಿರ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ತಾನು ಮೋಸ ಹೋಗಿರುವುದು ಖಚಿತವಾದ ಬಳಿಕ ಶಿವರಾಜ್ ಶಿಕಾರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಪ್ರಕರಣವನ್ನು ಜಗಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಖ್ಯಾತ ಸಿಗ್ಲಿ ಬಸ್ಯಾ ಪತ್ತೆಗೆ ಬಲೆ ಬೀಸಿದ್ದು, ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ : ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ ; ಪತಿಯ ವಿರುದ್ಧ ಕೊಲೆ ಆರೋಪ!



















