ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನಜೀವನ ತತ್ತರಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಗೆ ಬೃಹತ್ ಮರಗಳು ರಸ್ತೆಗಳ ಮೇಲೆ ಬಿದ್ದಿದ್ದು, ಹಲವು ಅವಾಂತರ ಸೃಷ್ಟಿಯಾಗಿದೆ.
ಸಂಜೆಯಾಗುತ್ತಿದ್ದಂತೆ ಆರಂಭವಾದ ವರುಣನ ಅಬ್ಬರಕ್ಕೆ ಪ್ರಮುಖ ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ವಾಹನ ಸವಾರರು ರಸ್ತೆಗಳಲ್ಲೇ ನರಕಯಾತನೆ ಅನುಭವಿಸುವಂತಾಯಿತು.
ಇಂದಿರಾನಗರ, ಕೆ.ಆರ್. ಪುರಂ, ಮಹದೇವಪುರ, ಮಲ್ಲೇಶ್ವರಂ ಹಾಗೂ ಮೆಜೆಸ್ಟಿಕ್ ಸೇರಿದಂತೆ ಹಲವು ಭಾಗಗಳಲ್ಲಿ ಬಿರುಗಾಳಿ ಮಳೆ ಅವಾಂತರ ಸೃಷ್ಟಿಸಿದೆ. ಪೀಣ್ಯದ ಬಿಎಫ್‌ಡಬ್ಲ್ಯೂ ರಸ್ತೆ, ಸಂಜಯನಗರ ಮುಖ್ಯ ರಸ್ತೆ, ಗಂಗಮ್ಮ ಸರ್ಕಲ್, ಜಾಲಹಳ್ಳಿ ಹಾಗೂ ವೀರಣ್ಣಪಾಳ್ಯ ಜಂಕ್ಷನ್‌ಗಳಲ್ಲಿ ಬೃಹತ್ ಮರಗಳು ಉರುಳಿ ಬಿದ್ದಿವೆ.
ವೈಟ್‌ಫೀಲ್ಡ್ ರಸ್ತೆಯೊಂದರಲ್ಲೇ 3 ರಿಂದ 4 ಕಡೆ ಮರಗಳು ಧರಾಶಾಯಿಯಾಗಿದ್ದು, ಶಾಂತಿನಿಕೇತನ ಜಂಕ್ಷನ್ ಬಳಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಅನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಹೆಬ್ಬಾಳ ಮತ್ತು ಕೆ.ಆರ್. ಪುರಂ ರಿಂಗ್ ರೋಡ್ ಸರ್ವಿಸ್ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.
ಬೀದರ್‌ನಲ್ಲಿ ಕಂದಮ್ಮ ಬಲಿ :
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ತಹಶೀಲ್ದಾರ್ ಕಚೇರಿ ಬಳಿಯಿರುವ ಬಡಾವಣೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಮೇಲಿದ್ದ ಭಾರವಾದ ಕಲ್ಲುಗಳು ನೇರವಾಗಿ ಮನೆಯೊಳಗೆ ಬಿದ್ದ ಪರಿಣಾಮ, 6 ವರ್ಷದ ಬಾಲಕಿ ಮಾಹೇರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಕುಟುಂಬದ ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮನೆ, ಜ್ಯುವೆಲ್ಲರಿ ಶಾಪ್‌ಗೆ ಕನ್ನ ಹಾಕ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ!


















