ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಕಾಲ್ಡ್ ಲೇಡಿ ಡಾನ್ಸ್ ಹಾವಳಿ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತಹ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಮಹಿಳೆಯೊಬ್ಬರು ಹಾಗೂ ಇಬ್ಬರು ಪುರುಷರು ಸೇರಿಕೊಂಡು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಸಂಗೀತ ರಾಮ್ ಎಂಬ ಮಹಿಳೆ “ನಾನು ಕರ್ನಾಟಕ ಯುವಸೇನೆಯ ಮುಖ್ಯಸ್ಥೆ”, “ಮಹಿಳಾ ಸಂಘದ ಅಧ್ಯಕ್ಷೆ” ಎಂದು ಹೇಳಿಕೊಂಡು ಧಮ್ಕಿ ಹಾಕಿದ್ದಾಳೆ ಎನ್ನಲಾಗಿದೆ. ಇದೇ ವೇಳೆ 15ರಿಂದ 20 ಜನರನ್ನು ಸೇರಿಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ಕೇಳಿಬಂದಿದೆ.
ಶಿವಾಜಿನಗರದಲ್ಲಿ ರಿಯಲ್ ಎಸ್ಟೇಟ್ ಸಂಬಂಧಿಸಿದ ಜಾಗದ ವಿಚಾರಕ್ಕೆ ಈ ಗಲಾಟೆ ನಡೆದಿದ್ದು, ವೆಂಕಟರಾಜು ಅವರು ಶಿವಾಜಿನಗರದಲ್ಲಿನ ಸೈಟ್‌ನ್ನು ಅಗ್ರಿಮೆಂಟ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ವೆಂಕಟರಾಜು ಅವರ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. “ಅಗ್ರಿಮೆಂಟ್ ರಿಜಿಸ್ಟರ್ ಮಾಡ್ಕೊಂಡಿದ್ದೀಯಾ, ಇನ್ನೂ ಆ ಜಾಗಕ್ಕೆ ಹೋಗ್ಬೇಡ”, “ನಾವು ನಿನ್ನ ತಂಟೆಗೆ ಬರಬಾರದೆಂದರೆ 10 ಲಕ್ಷ ರೂಪಾಯಿ ಕೊಡು” ಎಂದು ಬೆದರಿಕೆ ಹಾಕಿರುವುದಾಗಿ ಉದ್ಯಮಿ ಆರೋಪಿಸಿದ್ದಾರೆ.
ಇದೇ ವೇಳೆ, ಪೊಲೀಸರಿಗೆ ದೂರು ನೀಡಿದರೆ ಕಚೇರಿಗೆ ನುಗ್ಗಿ ಹಲ್ಲೆ ನಡೆಸುವುದಾಗಿ ಹಾಗೂ ಹೊಡೆಯುವುದಾಗಿ ಸಹ ಧಮ್ಕಿ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಬಳಿಕ ವೆಂಕಟರಾಜು ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬಸ್ ಬಂದ್ ಭೀತಿ – ಇಂದು ತೀರ್ಮಾನಾತ್ಮಕ ಸಂಧಾನ ಸಭೆ!



















