ಬೆಂಗಳೂರು ; ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ಭವಿಷ್ಯ ಇಂದು ನಡೆಯಲಿರುವ ಮಹತ್ವದ ಸಂಧಾನ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ. ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳು, ನಾಲ್ಕು ಸಾರಿಗೆ ನಿಗಮಗಳ ಎಂಡಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ನೌಕರರ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸ್ಪಷ್ಟ ಭರವಸೆ ನೀಡದಿದ್ದರೆ, ಬುಧವಾರದಿಂದ ರಾಜ್ಯಾದ್ಯಂತ ಬಸ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಬಸ್ ಸೇವೆ ಅತ್ಯಗತ್ಯವಾಗಿರುವುದರಿಂದ, ಮುಷ್ಕರ ತಪ್ಪಿಸಲು ಕಾರ್ಮಿಕ ಇಲಾಖೆ ಸಂಧಾನದ ಪ್ರಯತ್ನ ನಡೆಸುತ್ತಿದೆ. ಆದರೆ, ನೌಕರರು ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು :
- 25% ವೇತನ ಹೆಚ್ಚಳ ಮಾಡಬೇಕು.
- 2024ರ ಜನವರಿಯಿಂದಲೇ 25% ವೇತನ ಪರಿಷ್ಕರಣೆ ಜಾರಿಯಾಗಬೇಕು.
- ಬಾಕಿ ವೇತನವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು.
- 26 ತಿಂಗಳ ಬಾಕಿ ವೇತನವನ್ನು ಒಂದೇ ಕಂತಿನಲ್ಲಿ ನೀಡಬೇಕು.
- ವಿವಿಧ ಭತ್ಯೆಗಳನ್ನು ಹೆಚ್ಚಿಸಬೇಕು.
- ಕೋವಿಡ್-19 ಅವಧಿಯಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ತಕ್ಷಣ ವಿತರಿಸಬೇಕು.
- ಆಡಳಿತಾತ್ಮಕ ಸಮಸ್ಯೆಗಳನ್ನು ಒಂದು ತಿಂಗಳೊಳಗೆ JAC ಜೊತೆ ಚರ್ಚಿಸಿ ಪರಿಹರಿಸಬೇಕು.
- 26 ತಿಂಗಳ ಬಾಕಿ 1,272 ಕೋಟಿ ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.
ಈ ನಡುವೆ, ಸಾರಿಗೆ ಸಂಘಟನೆಗಳ ಮುಖಂಡರು .ವಾಯುವ್ಯ ಹಾಗೂ ನೈಋತ್ಯ ಸಾರಿಗೆ ನಿಗಮಗಳ ವಿವಿಧ ಘಟಕಗಳಿಗೆ ಕರಪತ್ರ ಹಂಚಿ, ಮುಷ್ಕರಕ್ಕೆ ಬೆಂಬಲಿಸುವಂತೆ ಸಿಬ್ಬಂದಿಯನ್ನು ಮನವಿ ಮಾಡಿದ್ದಾರೆ. ಇದರಿಂದ ಬುಧವಾರದಿಂದ ರಾಜ್ಯದ ಜನತೆಗೆ “ಬಸ್ ಬಂದ್ ಬಿಸಿ” ತಟ್ಟುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಂದಿನ ಸಂಧಾನ ಸಭೆಯಲ್ಲಿ ಸರ್ಕಾರ ಮತ್ತು ನೌಕರರ ನಡುವೆ ಒಪ್ಪಂದವಾಗುತ್ತದೆಯೇ ಅಥವಾ ಮಾತುಕತೆ ವಿಫಲವಾಗಿ ಮುಷ್ಕರಕ್ಕೆ ದಾರಿ ಮಾಡಿಕೊಡುತ್ತದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 8,176 ಕಾನ್ಸ್‌ಟೇಬಲ್, ಎಸ್ಐ ಹುದ್ದೆಗಳ ನೇಮಕಾತಿ ಶುರು



















