ಬೆಂಗಳೂರು : ಹಲವು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನನ್ನು ಬೆಂಗಳೂರಿನ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.
ಚಂದ್ರೇಗೌಡ ಬಂಧಿತನಾಗಿದ್ದು, ಈತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ವಿಡಿಯೋ ಮಾಡಿಟ್ಟುಕೊಂಡು ಯುವತಿಯರಿಗೆ ಪೀಡಿಸುತ್ತಿದ್ದ. ನಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಬಿಂಬಿಸಿ, ನಕಲಿ ಐಡಿ ಮಾಡಿಕೊಂಡು ಹಲವರಿಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.
ಇನ್ನು ಆರೋಪಿ ಚಂದ್ರೇಗೌಡ ಮೊಬೈಲ್ ಪರಿಶೀಲಿಸಿದಾಗ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಪತ್ತೆಯಾಗಿವೆ. ಇತ್ತೀಚೆಗೆ ಗಂಡನಿಂದ ದೂರವಾಗಿದ್ದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಗೆ ‘ನಾನು ಲೆಕ್ಚರ್’ ಎಂದು ಪರಿಚಯ ಮಾಡಿಕೊಂಡಿದ್ದ. ನನಗೆ ಡಿವೋರ್ಸ್ ಆಗಿದ್ದು, ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ.
ಖಾಸಗಿ ಕ್ಷಣವನ್ನು ವಿಡಿಯೋ ಮಾಡಿಕೊಂಡಿದ್ದ ಚಂದ್ರೇಗೌಡ ಅದನ್ನು ಇಟ್ಟುಕೊಂಡು ಮಹಿಳೆಗೆ ಹೆದರಿಸಿ ಆಕೆಯಿಂದ 5 ಲಕ್ಷ ಹಣ ಪಡೆದಿದ್ದ ಎಂದು ದೂರಲಾಗಿದೆ. ಸಂತ್ರಸ್ತ ಮಹಿಳೆ ಒಮ್ಮೆ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದ್ದ ವೇಳೆ ಆಕೆಗೆ ಶಾಕ್ ಆಗಿದ್ದು, ಮೊಬೈಲ್ನಲ್ಲಿ ಹಲವು ಮಹಿಳೆಯರ ವಿಡಿಯೋ, ಚಾಟಿಂಗ್ ಪತ್ತೆಯಾಗಿತ್ತು. ಹೀಗಾಗಿ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಇದೀಗ ಬಂಧಿಸಿದ್ದಾರೆ.
ಇದನ್ನೂ ಓದಿ : ಪ್ರೀತಿಸುವುದಾಗಿ ನಂಬಿಸಿ ‘ಕೈ’ಕೊಟ್ಟ ಕಾಂಗ್ರೆಸ್ ಮುಖಂಡ – ಲೈಂಗಿಕ ಸಂಪರ್ಕದ ಬಳಿಕ ಯುವತಿಗೆ ವಂಚನೆ!


















