ಬಾಗಲಕೋಟೆ : ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸೈನಿಕನ ಮಗಳು ಅಮೋಘ ಸಾಧನೆ ಮಾಡಿದ್ದಾಳೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರಿನ ವಿದ್ಯಾರ್ಥಿನಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಪೂಜಾರ್ 97.44 ಪರ್ಸೆಂಟೇಜ್ ಮಾಡುವ ಮೂಲಕ ಶಾಲೆಗೆ ಪ್ರಥಮ ರ್ಯಾಂಕ್ ಪಡೆದಿದ್ದಾಳೆ.

625ಕ್ಕೆ 609 ಅಂಕ ಪಡೆದಿರುವ ಪ್ರಿಯಾಂಕಾಗೆ ಕನ್ನಡ ವಿಷಯದಲ್ಲಿ ಔಟಾಫ್ ಔಟ್ ಸಿಕ್ಕಿದೆ. ಇಂಗ್ಲಿಷ್ 100ಕ್ಕೆ 96 ಅಂಕ ಗಳಿಸಿದ್ರೆ, ಹಿಂದಿ ಪರೀಕ್ಷೆಯಲ್ಲಿ 100ಕ್ಕೆ 100 ಮಾರ್ಕ್ಸ್ ಪಡೆದಿದ್ದಾಳೆ. ಹಾಗೆಯೇ ಗಣಿತ ವಿಷಯದಲ್ಲಿ 98, ವಿಜ್ಞಾನದಲ್ಲಿ 93 ಹಾಗೂ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 97 ಅಂಕ ಪಡೆಯುವ ಮೂಲಕ ಶಾಲೆಗೆ ಫಸ್ಟ್ ರ್ಯಾಂಕ್ ಗಳಿಸಿದ ಸಾಧನೆಗೆ ಪಾತ್ರವಾಗಿದ್ದಾಳೆ.

ಎಸ್ಎಸ್ಎಲ್ ಸಿಯಲ್ಲಿ ಅಮೋಘ ಸಾಧನೆ ಮಾಡಿದ ಪ್ರಿಯಾಂಕಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಬಾಗಲಕೋಟೆಯ ಹಿರಿಯ ಉಪವಿಭಾಗ ಅಧಿಕಾರಿಗಳಾದ ಸಂತೋಷ್ ಎಸ್. ಜಗಲಾಸರ್ ಅವರು ಪ್ರಿಯಾಂಕಾಗೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದರು. ಹಾಗೆಯೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕ ಮುಚ್ಚಳ ಗುಡ್ಡ ಶಾಲೆಯ ಪ್ರಿನ್ಸಿಪಾಲ್ ಶ್ರೀ ಬಸವರಾಜ್ ವಾಲಿಕಾರ, ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಮಾಂತೇಶ್ ಮಳೆಮಠ, ವಸತಿ ಶಾಲೆಯ ವಿಷಯ ಬೋಧಕರು, ವಾರ್ಡನ್, ಮತ್ತು ಪಾಲಕರು ಪೋಷಕರು ಮತ್ತು ಯರಗೊಪ್ಪ ಎಸ್ ಬಿ ಗ್ರಾಮದ ಗುರು ಹಿರಿಯರು ವಿದ್ಯಾರ್ಥಿ ನಿಗೆ ಸನ್ಮಾನ ಮಾಡಿ ಗೌರವಿಸಿದರು.

ಇನ್ನು, ಪ್ರಿಯಾಂಕಾ ತಂದೆ ಬಸವರಾಜು ಬಿಎಸ್ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಸವಿತಾ ಅಂಗನವಾಡಿ ಟೀಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದೆ ಇರುವ ಪ್ರಿಯಾ, ಇತ್ತೀಚೆಗಷ್ಟೇ ಭಾಷಣ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಂದ ಪ್ರಶಂಸೆ ಪಡೆದಿದ್ದಳು. ಈಗ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಮಗಳ ಸಾಧನೆಗೆ ತಂದೆ-ತಾಯಿ, ಸಂಬಂಧಿಕರು ಖುಷ್ ಆಗಿದ್ದಾರೆ.


















