ಟೆಹ್ರಾನ್: ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಸಂಧಾನ ಯತ್ನಗಳು ಮುಂದುವರಿದಿರುವ ಬೆನ್ನಲ್ಲೇ, ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ನಿಲುವಿನ ಬಗ್ಗೆ ಇರಾನ್ ಸಂಸದರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಅಮೆರಿಕದ ಹಿತಾಸಕ್ತಿಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಸಂಧಾನ ಪ್ರಕ್ರಿಯೆಯಲ್ಲಿ ಅದಕ್ಕೆ ವಿಶ್ವಾಸಾರ್ಹತೆ ಇಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇರಾನ್‌ನ ದಷ್ಟೆಸ್ತಾನ್ ಪ್ರಾಂತ್ಯವನ್ನು ಪ್ರತಿನಿಧಿಸುವ ಮತ್ತು ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿ ಆಯೋಗದ ವಕ್ತಾರರಾಗಿರುವ ಇಬ್ರಾಹಿಂ ರೆಜಾಯಿ ಅವರೇ ಈ ರೀತಿ ಅಸಮಾಧಾನ ಹೊರಹಾಕಿದವರು. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಪಾಕಿಸ್ತಾನ ನಮಗೆ ಉತ್ತಮ ನೆರೆಹೊರೆಯ ರಾಷ್ಟ್ರ ಹಾಗೂ ಸ್ನೇಹಿತ. ಆದರೆ, ಮಾತುಕತೆಗಳಿಗೆ ಅದು ಸೂಕ್ತ ಮಧ್ಯಸ್ಥಿಕೆದಾರನಲ್ಲ. ಅದಕ್ಕೆ ಮಧ್ಯಸ್ಥಿಕೆ ವಹಿಸಲು ಬೇಕಾದ ವಿಶ್ವಾಸಾರ್ಹತೆಯ ಕೊರತೆಯಿದೆ” ಎಂದು ಟೀಕಿಸಿದ್ದಾರೆ. ಇಸ್ಲಾಮಾಬಾದ್ ಯಾವಾಗಲೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿತಾಸಕ್ತಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ಅಮೆರಿಕದ ಇಚ್ಛೆಗೆ ವಿರುದ್ಧವಾಗಿ ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಅಮೆರಿಕವನ್ನು ಟೀಕಿಸಲು ಪಾಕ್ ಹಿಂದೇಟು
ಲೆಬನಾನ್ ಮತ್ತು ನಿರ್ಬಂಧಿತ ಆಸ್ತಿಗಳ ವಿಚಾರದಲ್ಲಿ ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸಲು ವಿಫಲವಾದಾಗಲೂ ಪಾಕಿಸ್ತಾನ ಅದನ್ನು ಟೀಕಿಸಿಲ್ಲ ಎಂದು ರೆಜಾಯಿ ಗಮನಸೆಳೆದಿದ್ದಾರೆ. “ಅಮೆರಿಕ ಮೊದಲು ಪಾಕಿಸ್ತಾನದ ಪ್ರಸ್ತಾವನೆಯನ್ನು ಒಪ್ಪಿಕೊಂಡು ನಂತರ ಮಾತು ತಪ್ಪಿದ್ದನ್ನು ಜಗತ್ತಿಗೆ ಹೇಳಲು ಅವರು ಸಿದ್ಧರಿಲ್ಲ. ಮಧ್ಯಸ್ಥಿಕೆ ವಹಿಸುವವರು ನಿಷ್ಪಕ್ಷಪಾತವಾಗಿರಬೇಕು, ಯಾವಾಗಲೂ ಒಂದೇ ಕಡೆ ವಾಲಬಾರದು” ಎಂದು ಅವರು ಹೇಳಿದ್ದಾರೆ. ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳು ಹಾಗೂ ಹೊರ್ಮುಜ್ ಜಲಸಂಧಿಯ ಪ್ರವೇಶದಂತಹ ಪ್ರಮುಖ ವಿಚಾರಗಳಲ್ಲಿ ಉಭಯ ದೇಶಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಕಳೆದ ವಾರ ಪಾಕಿಸ್ತಾನ ಮತ್ತು ಓಮಾನ್‌ಗೆ ಭೇಟಿ ನೀಡಿ, ಇದೀಗ ರಷ್ಯಾದತ್ತ ಮುಖ ಮಾಡಿದ್ದಾರೆ.
ಮಾತುಕತೆಗೆ ಟ್ರಂಪ್ ಮುಕ್ತ ಆಹ್ವಾನ
ಇದೇ ವೇಳೆ, ಫಾಕ್ಸ್ ನ್ಯೂಸ್‌ನ ‘ದಿ ಸಂಡೇ ಬ್ರೀಫಿಂಗ್’ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ತಿಂಗಳ ಯುದ್ಧವನ್ನು ಕೊನೆಗಾಣಿಸಲು ಇರಾನ್ ಬಯಸಿದರೆ ಮಾತುಕತೆಗೆ ಬರಬಹುದು ಎಂದು ಹೇಳಿದ್ದಾರೆ. “ಅವರು ಮಾತನಾಡಲು ಬಯಸಿದರೆ ನಮ್ಮ ಬಳಿ ಬರಬಹುದು ಅಥವಾ ನಮಗೆ ಕರೆ ಮಾಡಬಹುದು. ನಮ್ಮಲ್ಲಿ ಅತ್ಯಂತ ಸುರಕ್ಷಿತ ಟೆಲಿಫೋನ್ ಲೈನ್‌ಗಳಿವೆ” ಎಂದು ಅವರು ತಿಳಿಸಿದ್ದಾರೆ. ಆದರೆ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದುವಂತಿಲ್ಲ; ಇಲ್ಲವಾದಲ್ಲಿ ಭೇಟಿಯಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ಕಟ್ಟುನಿಟ್ಟಿನ ಷರತ್ತನ್ನು ಟ್ರಂಪ್ ಮುಂದಿಟ್ಟಿದ್ದಾರೆ.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಆರಂಭವಾದ ಈ ಯುದ್ಧದಲ್ಲಿ ಪ್ರಸ್ತುತ ಕದನ ವಿರಾಮವಿದ್ದರೂ, ಪೂರ್ಣಪ್ರಮಾಣದ ಒಪ್ಪಂದ ಇನ್ನೂ ಏರ್ಪಟ್ಟಿಲ್ಲ. ಯುರೇನಿಯಂ ಪುಷ್ಟೀಕರಣ ತನ್ನ ಹಕ್ಕು, ಇದು ಕೇವಲ ಶಾಂತಿಯುತ ಉದ್ದೇಶಗಳಿಗಾಗಿ ಎಂದು ಇರಾನ್ ವಾದಿಸುತ್ತಿದ್ದರೆ, ಪಾಶ್ಚಿಮಾತ್ಯ ರಾಷ್ಟ್ರಗಳು ಇದು ಪರಮಾಣು ಅಸ್ತ್ರ ತಯಾರಿಸುವ ಹುನ್ನಾರ ಎಂದು ಆರೋಪಿಸುತ್ತಿವೆ.
ಇದನ್ನೂ ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ದಾಳಿಕೋರನ ‘ಟಾರ್ಗೆಟ್’ ಲಿಸ್ಟ್‌ನಲ್ಲಿ ಇರದ ಏಕೈಕ ಹೆಸರು ಕಶ್ ಪಟೇಲ್!


















